ಅರಣ್ಯಾಧಿಕಾರಿ ರವಿಗೆ ಸಿಎಂ ಪದಕ

ravi rupsing
Published on

ಔರಾದ್: ಬೀದರ್ ಉಪ ವಲಯ ಅರಣ್ಯ ಕಚೇರಿಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಮುರ್ಕಿ ಗ್ರಾಮದ ರವಿ ರೂಪಸಿಂಗ್ ಆಡೆ ಅವರಿಗೆ 2019ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರವಿ ರೂಪಸಿಂಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅರಣ್ಯ ಸಚಿವ ಆನಂದ ಸಿಂಗ್, ಅರಣ್ಯ ಇಲಾಖೆ ಹೆಚ್ಚವರಿ ಕಾರ್ಯದರ್ಶಿ ಡಾ. ಸಂದೀಪ ದವೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ ಮೋಹನ್ ಇತರರಿದ್ದರು.

2018-19ನೇ ಸಾಲಿನ ವನ್ಯ ಜೀವಿ ಸಂರಕ್ಷಣೆ, ಅಪರಾಧ ತಡೆ, ನೆಡು ತೋಪು, ಅತಿಕ್ರಮಣ ಮತ್ತು ಒತ್ತುವರಿ ಮೀಸಲು ಅರಣ್ಯ ಪ್ರದೇಶದ ಜಮೀನು ತೆರವುಗೊಳಿಸಿ ಸರ್ಕಾರದ ಸುಪರ್ದಿಗೆ ನೀಡುವುದು ಸೇರಿ ವಿವಿಧ ಸೇವೆ ಗುರುತಿಸಿ ರವಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಮುರ್ಕಿ ನಿವಾಸಿಯಾದ ರವಿ ಡಿಇಡಿ ಪದವೀಧರರು. 2010-11ರಲ್ಲಿ ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಆಗಿ ಆಯ್ಕೆಯಾಗಿ ಕೊಡಗು ಜಿಲ್ಲೆಯ ವಿರಾಜಪೇಟೆ ವಿಭಾಗದಲ್ಲಿ ಸೇವೆಗೆ ಸೇರಿದರು. ಕರ್ನಾಟಕ ಗಡಿಯಿಂದ ಕೇರಳದ ಗಡಿಯೊಳಗೆ ಕಳ್ಳ ಸಾಗಣೆಯಾಗುತ್ತಿದ್ದ ಜಾನುವಾರು ರಹಸ್ಯ ಬಯಲಿಗೆಳೆದು, ಕೃತ್ಯ ಮಾಡಿದವರಿಗೆ ಜೈಲಿಗೆ ಅಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ತಾಲೂಕಿನ ಸಂತಪುರ, ಔರಾದ್ ಉಪ ವಲಯ ಅರಣ್ಯ ಕಚೇರಿಯಲ್ಲಿ ಸೇವೆ ಸಲ್ಲಿಸಿ, 1300 ಎಕರೆ ಅರಣ್ಯ ಒತ್ತುವರಿ ಮಾಡಿದ ಭೂಮಿ ಸರ್ಕಾರದ ಸುಪರ್ದಿಗೆ ಕೊಟ್ಟರು. 75 ಕಿಮೀ ರಸ್ತೆಯಲ್ಲಿ 50 ಸಾವಿರಕ್ಕೂ ಹೆಚ್ಚಿನ ಸಸಿ ರಸ್ತೆ ಬದಿಗಳಲ್ಲಿ ನೆಟ್ಟರು. ವನ್ಯ ಪ್ರಾಣಿಗಳಿಂದ ಬೆಳೆ ಮತ್ತು ಪ್ರಾಣ ಹಾನಿಗೊಳಗಾದ 350 ಕುಟುಂಬಗಳಿಗೆ ಸರ್ಕಾರದ ಸಹಾಯಧನ ಕೊಡಿಸುವಲ್ಲಿ ರವಿ ಅವರ ಕೊಡುಗೆ ಅಪಾರ.
ಇತ್ತೀಚೆಗೆ ಗಡಿಕುಶನೂರು ಗ್ರಾಮದಲ್ಲಿ ರೈತ ಮಾರುತಿ (30) ವನ್ಯ ಪ್ರಾಣಿ ದಾಳಿಗೆ ಪ್ರಾಣ ಕಳೆದುಕೊಂಡಿದ್ದ. ರೈತನ ಕುಟುಂಬಕ್ಕೆ 7.50 ಲಕ್ಷ ರೂ. ಸಹಾಯಧನ ಕೊಡಿಸುವಲ್ಲಿ ರವಿ ಪ್ರಮುಖ ಪಾತ್ರ ವಹಿಸಿದರು. ರವಿ ಸಾಧನೆ ಹಾಗೂ ಸಿಎಂ ಪ್ರಶಸ್ತಿ ಮುಡಿಗೇರಿದ್ದಕ್ಕೆ ಅರಣ್ಯ ಇಲಾಖೆ ಡಿಸಿಎಫ್ ಶಿವಶಂಕರ, ಆರ್.ಎಫ್.ಒ ಪ್ರವೀಣಕುಮಾರ, ಪ್ರೇಮಶೇಖರ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಹತ್ತು ವರ್ಷದಿಂದ ಸಲ್ಲಿಸುತ್ತಿರುವ ಸೇವೆ ತೃಪ್ತಿ ನೀಡಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸಲಹೆ ಮೇರೆಗೆ ಒಳ್ಳೆಯ ಕೆಲಸ ಮಾಡಲು ಸಹಕಾರಿಯಾಗಿದೆ. ಮುಖ್ಯಮಂತ್ರಿಗಳ ಪದಕ ಜವಾಬ್ದಾರಿ ಹೆಚ್ಚಿಸಿದೆ.| ರವಿ ರೂಪಸಿಂಗ್, ಸಿಎಂ ಪದಕ ವಿಜೇತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net