ಅರಣ್ಯಭೂಮಿ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸಭೆ

28 ckm 1 web
Published on

ಚಿಕ್ಕಮಗಳೂರು: ಅರಣ್ಯಭೂಮಿ ಸಮಸ್ಯೆ ಪರಿಹರಿಸಲು ಅರಣ್ಯ ಇಲಾಖೆ ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸಭೆ ನಡೆಸಿ ಸಮಗ್ರ ವರದಿ ತಯಾರಿಸಿದರೆ ಅಕ್ಟೋಬರ್​ನಲ್ಲಿ ಅರಣ್ಯ-ಕಂದಾಯ ಭೂಮಿ ಸಮಸ್ಯೆ ಕುರಿತಂತೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.\

ಜಿಪಂನಲ್ಲಿ ಬುಧವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲಿ ಅರಣ್ಯಹಕ್ಕು 4(1) ಅಧಿಸೂಚನೆ ರದ್ದುಪಡಿಸಬೇಕೆಂದು ಎಲ್ಲ ಶಾಸಕರೂ ಬೇಡಿಕೆ ಇರಿಸಿದಾಗ ಪರಿಹಾರೋಪಾಯ ತಿಳಿಸಿದರು.  ಜಿಲ್ಲೆಯ ಶಾಸಕರು ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ಕುರಿತು ಸುಮಾರು ಒಂದು ಗಂಟೆ ಕಾಲ ರ್ಚಚಿಸಿದಾಗ ಸದ್ಯದಲ್ಲೇ ಈ ಕುರಿತು ಪ್ರತ್ಯೇಕ ಸಭೆ ನಡೆಸುವಾದಾಗಿ ಭರವಸೆ ನೀಡಿದರು.  4(1) ಅಧಿಸೂಚನೆಗೆ ಸಂಬಂಧಿಸಿದಂತೆ ಅರಣ್ಯ ವ್ಯವಸ್ಥಾಪನಾಧಿಕಾರಿ ರಾಮಕೃಷ್ಣ ಮಾತನಾಡಿ, ಅಧಿಸೂಚನೆಗೆ ಸಂಬಂಧಿಸಿದಂತೆ 7168 ಅರ್ಜಿ ಬಂದಿದ್ದು, ಈ ಪೈಕಿ 3628 ಅರ್ಜಿಗಳ ವಿಚಾರಣೆ ಮಾಡಲಾಗಿದೆ. 1344 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು. ಮಲೆನಾಡಿನ ಹಲವು ಗ್ರಾಮಗಳಲ್ಲಿ ಜನವಸತಿ ಪ್ರದೇಶವಿದೆ. ಸರ್ಕಾರ ಮೂಲ ಸವಲತ್ತು ನೀಡಿದೆ. ಅಂಥ ಪ್ರದೇಶಗಳನ್ನು 4(1) ಅಧಿಸೂಚನೆ ವ್ಯಾಪ್ತಿಯೊಳಗೆ ಸೇರಿಸಲಾಗಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದಾಗ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕ ಟಿ.ಡಿ.ರಾಜೇಗೌಡ ಧ್ವನಿಗೂಡಿಸಿ, ಅಂತಿಮ ಅಧಿಸೂಚನೆ ಹೊರಡಿಸುವ ಮುನ್ನ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡಬೇಕು ಎಂದು ಆಗ್ರಹಿಸಿದರು.

ಅರ್ಜಿಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಬಾಳೆಹೊನ್ನೂರಿನಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿ ಕಚೇರಿ ತೆರೆಯಬೇಕೆಂದು ಎಂ.ಕೆ.ಪ್ರಾಣೇಶ್ ಹೇಳಿದಾಗ, ಜಿಲ್ಲೆಯಲ್ಲಿ 4(1) ಅಧಿಸೂಚನೆ ರದ್ದುಪಡಿಸಬೇಕೆಂದು ಎಂ.ಪಿ.ಕುಮಾರಸ್ವಾಮಿ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, 1987ರಿಂದ 2013ರವರೆಗೆ ಅರಣ್ಯಹಕ್ಕು ಕಲಂ 4(1) ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಈವರೆಗೆ ಇಂಡೀಕರಣ ಮಾಡಿಲ್ಲ, ಅಧಿಸೂಚನೆ ಹೊರಡಿಸುವ ಮೊದಲೇ ಸ್ವಾಧೀನ ಇದ್ದಿದ್ದರೆ ಸಮರ್ಪಕ ದಾಖಲಾತಿ ನೀಡಬೇಕು. ಜಿಲ್ಲೆಯಲ್ಲಿ ಸುಮಾರು 1018 ಪಹಣಿಗಳಲ್ಲಿ ಕಂದಾಯ ಮತ್ತು ಅರಣ್ಯ ಎಂಬುದಾಗಿ ನಮೂದು ಆಗಿತ್ತು. ಈ ಪ್ರಕರಣಗಳಲ್ಲಿ 463 ಆರ್​ಟಿಸಿಗಳನ್ನು ಸರಿಪಡಿಸಿ ಕಂದಾಯ ಭೂಮಿ ಎಂಬುದಾಗಿ ದಾಖಲಿಸಲಾಗಿದೆ ಎಂದರು.  ಭೈರತಿ ಬಸವರಾಜ್ ಮಾತನಾಡಿ, ಅರಣ್ಯ ಇಲಾಖೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ರ್ಚಚಿಸಲು 15 ದಿನಗಳೊಳಗೆ ಪ್ರತ್ಯೇಕವಾಗಿ ವಿಶೇಷ ಸಭೆ ಕರೆಯಲಾಗುವುದು. ಅಗತ್ಯ ಬಿದ್ದರೆ ಮುಖ್ಯಮಂತ್ರಿ ಬಳಿ ಹೋಗೋಣ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net