

ವಿಜಯವಾಣಿ ಸುದ್ದಿಜಾಲ ಧಾರವಾಡ
ಮೂರು ಎಕರೆಗಿಂತ ಹೆಚ್ಚು ಅರಣ್ಯಭೂಮಿ ಒತ್ತುವರಿ ಮಾಡಿದವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಅರಣ್ಯ ವೃತ್ತ ವ್ಯಾಪ್ತಿಯಲ್ಲಿ ಅತಿಕ್ರಮಣ ಕುರಿತು ದೂರುಗಳು ಬಂದಿವೆ. ಮೂರು ಎಕರೆವರೆಗೆ ಒತ್ತುವರಿ ಮಾಡಿದ್ದರೆ ಸದ್ಯ ಕ್ರಮವಿಲ್ಲ. ಆದರೆ ಅದಕ್ಕಿಂತ ಹೆಚ್ಚು ಅತಿಕ್ರಮಣ ಮಾಡಿದ್ದರೆ, ಅಂತಹವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಹಸಿರು ಸಂಪತ್ತು ಉಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಧಾರವಾಡ ಅರಣ್ಯ ತರಬೇತಿ ಕೇಂದ್ರವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಅಗತ್ಯ ಅನುದಾನ ನೀಡಿ ತರಬೇತಿ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಉದ್ಯಮ ಆರಂಭಿಸುವುದು ಅಗತ್ಯ. ಆದರೆ ಉದ್ಯಮ ಆರಂಭಿಸುವ ನೆಪದಲ್ಲಿ ಪರಿಸರ ಮಾಲಿನ್ಯಕ್ಕೆ ಅವಕಾಶ ನೀಡುವುದಿಲ್ಲ. ಪರಿಸರ ಸ್ನೇಹಿ ಉದ್ಯಮಗಳ ಆರಂಭಿಸಬೇಕು ಎಂದರು.
ಧಾರವಾಡ ವೃತ್ತದ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ 30 ಲಕ್ಷ ಸಸಿ ನೆಡುವ ಗುರಿ ಇದ್ದು, ಈಗಾಗಲೇ 10 ಲಕ್ಷ ಸಸಿ ನೆಡಲಾಗಿದೆ. ಆಗಸ್ಟ್ ಅಂತ್ಯಕ್ಕೆ 20 ಲಕ್ಷ ಸಸಿ ನೆಡಲಾಗುವುದು. ರೈತರಿಗೂ ಸಸಿ ನೀಡಲಾಗಿದೆ. ಮಳೆ ಕಡಿಮೆಯಾದ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮ ಮಂದಗತಿಯಲ್ಲಿದೆ. ರಾಜ್ಯಾದ್ಯಂತ 5 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದ್ದು, ಈವರೆಗೆ 3.10 ಕೋಟಿ ಸಸಿಗಳನ್ನು ನೆಡಲಾಗಿದೆ ಎಂದರು.