ಅರಣ್ಯದಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಶವ ಪತ್ತೆ

02.06 kml photo 01
Published on

ಕಮಲಾಪುರ: ಹೊರವಲಯದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಮಣ್ಣಿನಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಸಿರಡೋಣ ಬಳಿಯ ಅರಣ್ಯ ಪ್ರದೇಶದಲ್ಲಿ ಸಿಕ್ಕ ಶವದ ಮುಖ ಮತ್ತು ದೇಹದ ಇತರ ಕಡೆ ಜಜ್ಜಿದ್ದರಿಂದ ಗುರುತು ಸಿಕ್ಕಿಲ್ಲ. ಮಹಾಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪುರ ಹೊರವಲಯದಲ್ಲಿ ಅರಣ್ಯ ಇಲಾಖೆ ಜಮೀನಿದ್ದು, ದನ- ಕರು ಮೇಯಿಸುವವರು ಸೇರಿ ಕೆಲವರು ಮಾತ್ರ ತಿರುಗಾಡುತ್ತಾರೆ. ಮೇ ೩೧ರಂದು ಶಿರಡೋಣದ ಅಬ್ದುಲ್ ರಶೀದ್ ಎಂಬಾತ ದನ-ಕರು ಮೇಯಿಸಲು ಅರಣ್ಯ ಪ್ರದೇಶಕ್ಕೆ ಹೋಗಿದ್ದಾಗ ದುರ್ವಾಸನೆ ಬೀರಿದೆ. ಭಯದಿಂದ ವಾಪಸ್ ಬಂದಿದ್ದಾನೆ. ಬಳಿಕ ಜೂ.೧ರಂದು ಪೀರಪ್ಪ ಜತೆ ದುರ್ವಾಸನೆ ಬರುತ್ತಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಮನುಷ್ಯನ ಕಾಲು, ಕೈ, ಮೂಳೆಗಳು ಕಾಣಿಸಿವೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಿಎಸ್‌ಐ ಶಿವಪ್ಪ ಮೇಟಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಶುಕ್ರವಾರ ಬೆಳಗ್ಗೆ ಎಸ್‌ಪಿ ಇಶಾ ಪಂತ್, ಎಸಿ ಮಮತಾ, ತಹಸೀಲ್ದಾರ್ ರಮೇಶ ಪೆದ್ದಿ, ಸಿಪಿಐ ವಿ.ನಾರಾಯಣ ಸಮ್ಮುಖದಲ್ಲಿ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ೩೦-೩೫ ವರ್ಷದವ ಇರಬಹುದು. ೧೦ ದಿನ ಹಿಂದೆಯೇ ಕೃತ್ಯ ನಡೆದಿದೆ. ವರದಿ ಬಳಿಕವೇ ಸಮಗ್ರ ಮಾಹಿತಿ ಸಿಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net