ಅರಣ್ಯದಲ್ಲಿ ಬೆಂಕಿ ಪ್ರಕರಣ ತಡೆಗೆ ವಿಶೇಷ ಸಭೆ

24Rajesh2
Published on

ಚಾಮರಾಜನಗರ: ಬೇಸಿಗೆ ವೇಳೆ ಅರಣ್ಯದಲ್ಲಿ ಸಂಭವಿಸುವ ಕಾಳ್ಗಿಚ್ಚು ತಡೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದಕ್ಕಾಗಿ ಎಲ್ಲ ಇಲಾಖೆಗಳು ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಆಯೋಜಿಸಿದ್ದ ಅರಣ್ಯ ಬೆಂಕಿ ಪ್ರಕರಣ ತಡೆಗಟ್ಟಲು ಮುಂಜಾಗ್ರತಾ ವಿಶೇಷ ಸಭೆಯಲ್ಲಿ ಮಾತನಾಡಿದರು. ಅರಣ್ಯ ಪ್ರದೇಶವು ರಾಷ್ಟ್ರೀಯ ನೈಸರ್ಗಿಕ ಸಂಪತ್ತಾಗಿದ್ದು, ಜಿಲ್ಲಾ ವ್ಯಾಪ್ತಿಯು ಸುಮಾರು ಶೇ.52ರಷ್ಟು ಅರಣ್ಯ ಪ್ರದೇಶದಿಂದ ಕೂಡಿದೆ. ಅರಣ್ಯ ಬೆಂಕಿಯಿಂದ ನಮ್ಮ ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವುದು ಕೇವಲ ಅರಣ್ಯ ಇಲಾಖೆಯಲ್ಲ. ಎಲ್ಲ ಇಲಾಖೆಗಳ ಜಂಟಿ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಮಾತನಾಡಿ, ಕಳೆದ ಬಾರಿ ಅರಣ್ಯ ಬೆಂಕಿ ಸಂಭವಿಸಿದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಲ್ಲಿಗೆ ಪೋಲೀಸರು ಹಾಗೂ ಗಿರಿಜನ ಕಲ್ಯಾಣಾಧಿಕಾರಿ, ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಅರಣ್ಯ ಬೆಂಕಿ ಕುರಿತು ಅರಿವು ಮೂಡಿಸಲು ತಿಳಿಸಬೇಕು. ಮೂರು ಇಲಾಖೆಗಳನ್ನು ಒಳಗೊಂಡ ತಂಡಗಳನ್ನು ರಚಿಸಿ ಕೂಡಲೇ ಗಿರಿಜನ ಪೋಡಿಗೆ ಭೇಟಿ ನೀಡಿಬೇಕೆಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಹಲವು ಇಲಾಖೆಗಳನ್ನು ಒಳಗೊಂಡಂತೆ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಿ ಅರಣ್ಯ ಬೆಂಕಿ ಸಂಭವಿಸಿದಲ್ಲಿ ಕ್ರಮವಹಿಸುವಂತೆ ನಿರ್ದೇಶನ ನೀಡಿದರು. ಅಗತ್ಯವಿದ್ದಲ್ಲಿ ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ನಿಧಿಯಡಿ ಅರಣ್ಯ ಬೆಂಕಿ ತಡೆಗಟ್ಟಲು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.

ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್‌ಕುಮಾರ್, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಶ್ರೀಪತಿ, ಉಪ ವಿಭಾಗಾಧಿಕಾರಿ ಮಹೇಶ್, ವಿಭಾಗಗಳ ಪೊಲೀಸ್ ಉಪ ಅಧೀಕ್ಷಕರು, ವಲಯ ಅರಣ್ಯ ಅಧಿಕಾರಿಗಳು ಮತ್ತು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net