ಅರಣ್ಯದಲ್ಲಿ ಜಿಲೆಟಿನ್ ತುಂಬಿರುವ ಮೂಟೆಗಳು!, ಹಿರೇನಾಗವಲ್ಲಿ, ಮುತ್ತುಕದಹಳ್ಳಿಯಲ್ಲಿ ಪತ್ತೆ, ಶಿಕ್ಷೆಯಿಂದ ಪಾರಾಗಲು ಗಣಿ ಮಾಲೀಕರ ಕುತಂತ್ರ

25CBP1
Published on

ಚಿಕ್ಕಬಳ್ಳಾಪುರ: ಹಿರೇನಾಗವಲ್ಲಿ ಕಲ್ಲು ಗಣಿಯಲ್ಲಿ ಸಂಭವಿಸಿದ ಭಾರೀ ಸ್ಫೋಟಕ್ಕೆ 6 ಮಂದಿ ಬಲಿಯಾಗಿದ್ದರೂ ಗಣಿ ಮಾಲೀಕರು ಎಚ್ಚೆತ್ತುಕೊಂಡಂತಿಲ್ಲ. ಸ್ಫೋಟದ ಪರಿಣಾಮ ಅರಿತಿದ್ದರೂ ಸ್ಫೋಟಕಗಳನ್ನು ಮೂಟೆಗಳಲ್ಲಿ ತುಂಬಿ ಗಣಿಗಾರಿಕೆ ಕೇಂದ್ರದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಎಸೆದಿರುವುದು ಸ್ಥಳೀಯರ ಸಮಯ ಪ್ರಜ್ಞೆಯಿಂದ ಬೆಳಕಿಗೆ ಬಂದಿದೆ.

ಹಿರೇನಾಗವಲ್ಲಿ ಮತ್ತು ಮುತ್ತುಕದಹಳ್ಳಿಯ ಸಮೀಪದ ಕಾಲುವೆ, ಗಿಡಗಳ ನಡುವೆ ಜಿಲೆಟಿನ್ ಕಡ್ಡಿಗಳನ್ನು ತುಂಬಿರುವ 3 ಮೂಟೆಗಳು ಪತ್ತೆಯಾಗಿದ್ದು ಗ್ರಾಮಸ್ಥರ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ತಂತ್ರಜ್ಞರ ನೆರವಿನೊಂದಿಗೆ ರಾಶಿ ರಾಶಿ ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಫೋಟಗಳು ವಶಕ್ಕೆ: ಗಣಿಧೂಳಿನಲ್ಲಿ ದೊಡ್ಡ ದೊಡ್ಡ ಮೂಟೆಗಳು ಬಿದ್ದಿರುವುದನ್ನು ಕಂಡ ಸ್ಥಳೀಯರು ಅನುಮಾನಗೊಂಡು ನಡುರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ತಂತ್ರಜ್ಞರನ್ನು ಕರೆಸಿಕೊಂಡು ಪರಿಶೀಲಿಸಿದ್ದು, ಮೂಟೆಯೊಳಗೆ ಜಿಲೆಟಿನ್ ಕಡ್ಡಿಗಳು ಮತ್ತು ಇತರ ಸ್ಫೋಟಕಗಳು ಪತ್ತೆಯಾಗಿವೆ. ಜತೆಗೆ ಸ್ಫೋಟಕಗಳನ್ನು ತುಂಬಿರುವ ಮತ್ತಷ್ಟು ಮೂಟೆಗಳು ಇರುವ ಅನುಮಾನದಲ್ಲಿ ಗಣಿ ಕೇಂದ್ರ ಸುತ್ತಲಿನ ಪ್ರದೇಶಗಳಲ್ಲಿ ಪರಿಶೀಲಿಸಿದ್ದಾರೆ.

ಸ್ಫೋಟದಲ್ಲಿ 6 ಮಂದಿ ಬಲಿಯಾಗಿರುವ ದುರ್ಘಟನೆಯು ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ಇಷ್ಟಾದರೂ ಮಾಲೀಕರು ಜನರ ಹಿತವನ್ನು ಬದಿಗೊತ್ತಿ, ತಪ್ಪುಗಳನ್ನು ಮುಚ್ಚಿ ಹಾಕಲು ಯತ್ನಿಸುವ ಮೂಲಕ ಜನರು ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ.

ಬಚಾವಾಗಲು ಇನ್ನಿಲ್ಲದ ಕಸರತ್ತು : ಜಿಲ್ಲೆಯಲ್ಲಿ 174 ಕಲ್ಲು ಗಣಿ ಗುತ್ತಿಗೆ ಮತ್ತು 54 ಕ್ರಷರ್ ಘಟಕಗಳಿವೆ. ಹಿರೇನಾಗವಲ್ಲಿಯಲ್ಲಿ ಸ್ಫೋಟ ಸಂಭವಿಸುತ್ತಿದ್ದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಅವಘಡಗಳನ್ನು ತಪ್ಪಿಸುವ ಉದ್ದೇಶದಿಂದ ತಾತ್ಕಾಲಿಕವಾಗಿ ಎಲ್ಲ ಗಣಿಗಾರಿಕೆಗಳ ಕಾರ್ಯನಿರ್ವಹಣೆ ನಿಲ್ಲಿಸಿದೆ. ಆಯಾ ಘಟಕಗಳಲ್ಲಿ ಸ್ಫೋಟಕಗಳ ದಾಸ್ತಾನು ಪ್ರಮಾಣ, ಸುರಕ್ಷತಾ ಕ್ರಮಗಳ ಪಾಲನೆ ಸೇರಿ ಹಲವು ವಿಚಾರಗಳನ್ನು ಖಾತ್ರಿಪಡಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಅಕ್ರಮ ದಾಸ್ತಾನು ಮತ್ತು ಅವ್ಯವಹಾರಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿರುವುದರಿಂದ ಬಚಾವಾಗಲು ಗಣಿ ಮಾಲೀಕರು ಸ್ಫೋಟಕಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದು ಜಿಲ್ಲೆಯಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

ದಿಕ್ಕು ತಪ್ಪಿಸಲು ಯತ್ನ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ, ನಿಯಮಬಾಹಿರವಾಗಿ ಭಾರೀ ಪ್ರಮಾಣದಲ್ಲಿ ಸ್ಫೋಟಕ ಬಳಸುತ್ತಿರುವುದು ನಡೆದೇ ಇದೆ, ಆದರೆ ಶಿವಮೊಗ್ಗ ಹುಣಸೋಡು ಗಣಿ ಸ್ಫೋಟದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇಷ್ಟು ದಿನ ಜಾಣಕುರುಡರಂತೆ ಇದ್ದವರು ಈಗ ಬಿಗಿ ಕ್ರಮಗಳ ಮಾತುಗಳನ್ನಾಡುತ್ತಿರುವುದರಿಂದ ಶಿಕ್ಷೆಯಿಂದ ಪಾರಾಗಲು ಗಣಿ ಮಾಲೀಕರು ರಹಸ್ಯವಾಗಿ ಸ್ಫೋಟಕಗಳ ವಿಲೇವಾರಿ ಮಾಡುತ್ತಿದ್ದು ಎಲ್ಲರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಮುತ್ತುಗದಹಳ್ಳಿ ಬಳಿ ಜಿಲೆಟಿನ್ ಕಡ್ಡಿಗಳನ್ನು ಬಿಸಾಡಿರುವ ಬಗ್ಗೆ ಮಾಹಿತಿ ಗೊತ್ತಾದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ವೈಜ್ಞಾನಿಕವಾಗಿ ವಿಲೇವಾರಿಗೊಳಿಸಲಾಗಿದೆ. ಹಿರೇನಾಗವಲ್ಲಿ ದುರ್ಘಟನೆ ಬಳಿಕ ಯಾರೋ ಎಸೆದು ಹೋಗಿರಬಹುದು. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net