ಅರಣ್ಯದಂಚಿನಲ್ಲಿ ಸಾಗುವಳಿಗೆ ಅವಕಾಶಕ್ಕೆ ಆಗ್ರಹಿಸಿ ಪ್ರತಿಭಟನೆ

12
ಅರಣ್ಯದಂಚಿನ ರೈತರನ್ನು ಒಕ್ಕಲೆಬ್ಬಿಸದಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
Published on

ಮೈಸೂರು: ಅರಣ್ಯದಂಚಿನಲ್ಲಿ ಸಾಗುವಳಿ ಮಾಡಿ ಜೀವನ ನಡೆಸಲು ರೈತರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಅರಣ್ಯ ಇಲಾಖೆ ಸಾಗುವಳಿ ಮಾಡುತ್ತಿರುವ ಹುಣಸೂರು, ಮೈಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲೂಕಿನ ರೈತರಿಗೆ ನೋಟಿಸ್ ನೀಡಿ ಅವರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ. ಭೂಮಿ ನಂಬಿ ಬದುಕುತ್ತಿರುವ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಂದ ಜಮೀನನ್ನು ಕಿತ್ತುಕೊಳ್ಳಬಾರದು ಎಂದು ಒತ್ತಾಯಿಸಿದರು.

ಕಳೆದ ಆರು ದಶಕದಿಂದ ಅರಣ್ಯದಂಚಿನ ಭೂಮಿಗಳಲ್ಲಿ ಬಡ ರೈತರು ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ರೈತರಿಂದ ಇದುವರೆಗೂ ಅರಣ್ಯಕ್ಕಾಗಲಿ, ಪ್ರಾಣಿಗಳಿಗಾಗಲಿ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ. ಸಾಗುವಳಿ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ಹಲವಾರು ವರ್ಷದಿಂದ ಹೋರಾಟ ನಡೆಸಿ, ಸರ್ಕಾರದಿಂದ ಕೆಲ ರೈತರು ಸಾಗುವಳಿ ಪತ್ರವನ್ನೂ ಪಡೆದಿದ್ದಾರೆ. ಅವರಿಗೆ ಬದುಕಲು ಅವಕಾಶ ಕೊಡಬೇಕು. ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು.

ಅರಣ್ಯದಂಚಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ನೀಡಿರುವ ನೋಟಿಸ್ ಅನ್ನು ವಾಪಸ್ ಪಡೆಯಬೇಕು ಹಾಗೂ ನೋಟಿಸ್ ನೀಡದಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ಕೊಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಚಿಕ್ಕಣ್ಣೇಗೌಡ, ಜಗದೀಶ್ ಸೂರ್ಯ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net