ಅರಣ್ಯಕ್ಕೆ ಬೆಂಕಿ ಪ್ರಕರಣದ ಆರೋಪಿಗಳ ಖುಲಾಸೆ

Published on

ಗೋಣಿಕೊಪ್ಪಲು: ತಿತಿಮತಿ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೀರ್ಘ ವಿಚಾರಣೆ ನಡೆಸಿದ ಪೊನ್ನಂಪೇಟೆ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆ.

2014ರ ಮಾ.13ರಂದು ಪೊನ್ನಂಪೇಟೆ ಠಾಣೆ ಸರಹದ್ದಿನ ತಿತಿಮತಿ-ಮೈಸೂರು ಹೆದ್ದಾರಿ ರಸ್ತೆ ಬದಿಯ ಅರಣ್ಯದಲ್ಲಿ ಬೆಂಕಿ ಬಿದ್ದು ಅಪಾರ ಪ್ರಮಾಣದ ಮರ, ಗಿಡ, ಪ್ರಾಣಿ-ಪಕ್ಷಿ ಗಳು ಬೆಂಕಿಗೆ ಅಹುತಿಯಾಗಿದ್ದವು. ಅದೇ ಸಂದರ್ಭದಲ್ಲಿ ಆರೋಪಿಯೊಬ್ಬ ಅರಣ್ಯ ಇಲಾಖೆಗೆ ಕರೆಮಾಡಿ ನಾನು ಒಬ್ಬ ನಕ್ಸಲ್, ನಾನೇ ಬೆಂಕಿ ಹಾಕಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಪೊಲೀಸರು ಇಬ್ಬರು ಆರೋಪಿಗಳಾದ ಜೆ.ವಿನು, ಎಸ್.ಕೆ.ಉತ್ತಯ್ಯ ಅವರನ್ನು ಬಂಧಿಸಿ ಅವರ ವಿರುದ್ಧ ಕಲಂ. 435,507,211ಆರ್/ಬ್ಲ್ಯೂ 34 ಐಪಿಸಿ, 2ಕೆಪಿಡಿಲ್ ಆ್ಯಕ್ಟ್‌ನಡಿ ಕೇಸು ದಾಖಲಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು.

ನಂತರ ಸರ್ಕಾರ ಈ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಿ ಅವರೂ ತನಿಖೆ ಮಾಡಿ ಆರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಸುದೀರ್ಘ ವಿಚಾರಣೆ ನಡೆಸಿದ ಪೊನ್ನಂಪೇಟೆ ನ್ಯಾಯಾಲಯದ ನ್ಯಾಯಾಧೀಶರಾದ ಪ್ರದೀಪ್ ಪೊಟಾದಾರ್ ಅವರು ಸಾಕ್ಷಾೃಧಾರ ಇಲ್ಲದ ಕಾರಣ ಆರೋಪಿಗಳನ್ನು ಖುಲಾಸೆ ಮಾಡಿದ್ದಾರೆ. ಆರೋಪಿಗಳ ಪರ ವಕೀಲರಾದ ಎಂ.ಟಿ.ಕಾರ್ಯಪ್ಪ, ಬಿ.ಎಸ್.ಕುಮಾರಿ ವಕಾಲತ್ತು ವಹಿಸಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net