ಅರಣ್ಯ ಹಕ್ಕು ಕಾಯ್ದೆ ಸದುಪಯೋಗಪಡಿಸಿಕೊಳ್ಳಿ

HUN-JAN-6-3(LAMPS PROGRAMME)
Published on

ಹುಣಸೂರು: ಅರಣ್ಯ ಹಕ್ಕು ಕಾಯ್ದೆಯಡಿ ಕಿರು ಉತ್ಪನ್ನಗಳ ಸಂಗ್ರಹಣೆ ಸೇರಿದಂತೆ ಆದಿವಾಸಿಗಳು ಸಾಮುದಾಯಿಕ ಮತ್ತು ವೈಯಕ್ತಿಕ ಹಕ್ಕಿಗಾಗಿ ಅರ್ಜಿಗಳನ್ನು ಸಲ್ಲಿಸಲು ಸರ್ಕಾರ ನೀಡಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪರಿಶಿಷ್ಟ ಪಂಗಡಗಳ ನಿರ್ದೇಶಕ ಯೋಗೇಶ್ ತಿಳಿಸಿದರು.

ನಗರದ ಲ್ಯಾಂಪ್ಸ್ ಸಹಕಾರ ಸಂಘಕ್ಕೆ ಸೋಮವಾರ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಅರಣ್ಯ ಹಕ್ಕು ಕಾಯ್ದೆಯ ಸಮಗ್ರ ಜಾರಿಗಾಗಿ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆದಿವಾಸಿ ಗಿರಿಜನರು ತಮ್ಮ ಸಾಮುದಾಯಿಕ ಹಕ್ಕು ಮತ್ತು ವೈಯಕ್ತಿಕ ಹಕ್ಕುಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿಯಿಲ್ಲ. ಅಂತೆಯೇ ಆದಿವಾಸಿಗಳು ಅರಣ್ಯದಲ್ಲಿ ಕಿರು ಉತ್ಪನ್ನಗಳ ಸಂಗ್ರಹಣೆಗೆ ಅವಕಾಶ ನೀಡಿದ್ದು, ಈ ಎಲ್ಲ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಬೇಕು. ಶೀಘ್ರದಲ್ಲಿ ಗ್ರಾಮ ಅರಣ್ಯ ಸಮಿತಿಯಿಂದ ಆರಂಭಗೊಂಡು ಎಲ್ಲ ಸಮಿತಿಗಳನ್ನು ರಚಿಸಿ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದರು.

ಸಭೆಯಲ್ಲಿ ಉಪನಿರ್ದೇಶಕ ಪ್ರಕಾಶ್, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಮಲ್ಲೇಶ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಂಗಾಧರ್, ಲ್ಯಾಂಪ್ಸ್ ಅಧ್ಯಕ್ಷ ವೈ.ಕೆ. ಸುಬ್ರಮಣ್ಯ, ಉಪಾಧ್ಯಕ್ಷ ರಾಜೇಂದ್ರ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಅಧ್ಯಕ್ಷ ಎಂ. ಕೃಷ್ಣಯ್ಯ, ಲ್ಯಾಂಪ್ಸ್ ನಿರ್ದೇಶಕ ಬಸವರಾಜು, ಮಹದೇವ್, ಚಿನ್ನಪ್ಪ, ದ್ಯಾವ, ಭೋಜಯ್ಯ, ಸಂಜಯ್, ಭೋಜಮ್ಮ, ಪ್ರಶಾಂತ್, ಕುಮಾರ, ಬೊಮ್ಮಯ್ಯ ಹಾಗೂ ಎಂ.ಎಲ್. ರಘು ಹಾಜರಿದ್ದರು. ಇದೇ ವೇಳೆ ಅಧಿಕಾರಿಗಳು ಕೊಟ್ಟಿಗೆ ಕಾವಲ್ ಹಾಡಿಗೆ ಭೇಟಿ ನೀಡಿ ಗಿರಿಜನರಿಂದ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net