

ಎಚ್.ಡಿ.ಕೋಟೆ: ರಾಜ್ಯದ ಅರಣ್ಯ ಸಂಪತ್ತು ರಕ್ಷಣೆಗೆ ಶ್ರಮ ವಹಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರ ಹಿತಾಸಕ್ತಿ ಕಾಯುವುದು ಆದ್ಯ ಕರ್ತವ್ಯ ಎಂದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಧ್ರುವ್ ಪಾಟೀಲ್ ತಿಳಿಸಿದರು.
ತಾಲೂಕಿನ ದಮ್ಮನಕಟ್ಟೆ ವನ್ಯಜೀವಿ ಸಫಾರಿ ಕೇಂದ್ರದಲ್ಲಿ ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿಗಾಗಿ ಆಯೋಜಿಸಿದ್ದ ವಿಶೇಷ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನ ಅಪೂರ್ವ ವನಸಿರಿ ಹಾಗೂ ವನ್ಯಜೀವಿಗಳ ರಕ್ಷಣೆಗೆ ಮುಂಚೂಣಿವಹಿಸುವ ಗಸ್ತು ಅರಣ್ಯಪಾಲಕರು, ಅರಣ್ಯ ವೀಕ್ಷಕರು, ದಿನಗೂಲಿ ಮತ್ತು ಕ್ಷೇಮಾಭಿವೃದ್ಧಿ ನೌಕರರು ಸೇರಿದಂತೆ ವಾಹನ ಚಾಲಕರು ಅತ್ಯಂತ ದುರ್ಗಮ ಹಾದಿ ಹಾಗೂ ದಟ್ಟ ಕಾಡಿನೊಳಗೆ ಕಾರ್ಯ ನಿರ್ವಹಿಸುತ್ತಾರೆ. ವಾರಾನುಗಟ್ಟಲೇ ಮಳೆ, ಗಾಳಿ, ಬಿಸಿಲು ಎನ್ನದೆ ತಮ್ಮ ಕುಟುಂಬಗಳಿಂದ ದೂರ ಉಳಿದು ತುರ್ತು ಸಂದರ್ಭಗಳಲ್ಲೂ ಮೂಲ ಸೌಕರ್ಯ ಇಲ್ಲದೆ ಕಾರ್ಯ ನಿರ್ವಹಿಸುವುದನ್ನು ಈ ಹಿಂದೆ ತಾವೇ ಖುದ್ದಾಗಿ ಪರಿಶೀಲಿಸಿದ್ದು, ಇಂತಹ ಪರಿಸ್ಥಿತಿ ಸಾಧ್ಯವಾದಷ್ಟು ನಿಯಂತ್ರಿಸುವ ಸಲುವಾಗಿ ವಿಶೇಷ ಸುರಕ್ಷತಾ ಪರಿಕರಗಳಿರುವ 9,100 ವಿಶೇಷ ಕಿಟ್‌ಗಳನ್ನು ನೀಡಲಾಗುತ್ತದೆ. ರಾಜ್ಯ ಸಾಬೂನು ಮತ್ತು ಮಾರ್ಜಕಗಳ ಲಿಮಿಟೆಡ್(ಕೆಎಸ್‌ಡಿಎಲ್) ಸಹಭಾಗಿತ್ವದೊಂದಿಗೆ ಸಿಎಸ್‌ಆರ್ ನಿಧಿಯಲ್ಲಿ ಅರಣ್ಯ ಸಿಬ್ಬಂದಿಗೆ ವಿತರಣೆ ಮಾಡಲಾಗುತ್ತಿದೆ. ಈ ಕಿಟ್‌ನಲ್ಲಿ ಮಳೆ ಸುರಕ್ಷಿತ ಕವಚ, ವಿಶೇಷವಾಗಿ ವಿನ್ಯಾಸಗೊಂಡ ಸದೃಢ ಬೂಟುಗಳು, ಕುಡಿಯುವ ನೀರಿನ ಬಾಟಲ್ ಹಾಗೂ ರಕ್ಷಣಾಯುಧ ಪರಿಕರ ಇಡುವ ಬ್ಯಾಗ್ ಇರಲಿದೆ. ಸಿಬ್ಬಂದಿ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಪ್ರಶಾಂತ್ ಮಾತನಾಡಿ, ಕೈಗಾರಿಕ ಸಚಿವ ಎಂ.ಬಿ.ಪಾಟೀಲ್ ಮತ್ತು ಅಧ್ಯಕ್ಷ ಅಪ್ಪಾಜಿ ನಾಡಗೌಡರ ಅಧಿಕಾರ ಅವಧಿಯಲ್ಲಿ ಸಂಸ್ಥೆ 415 ಕೋಟಿ ರೂ. ಲಾಭ ಗಳಿಸಿದೆ. 7 ಕೋಟಿ ರೂ. ಸಿಎಸ್‌ಆರ್ ಅನುದಾನದಡಿ 2 ಕೋಟಿ ರೂ.ಗಳನ್ನು ಅರಣ್ಯ ಸಿಬ್ಬಂದಿ ರಕ್ಷಣೆಗೆ ಮೀಸಲಿಟ್ಟು ಸಚಿವ ಎಂ.ಬಿ.ಪಾಟೀಲ್ ಹಾಗೂ ವನ್ಯಜೀವಿ ಮಂಡಳಿ ಸದಸ್ಯ ಧ್ರುವ್ ಪಾಟೀಲ್ ನೇತೃತ್ವದಲ್ಲಿ ವಿಶೇಷ ಕಿಟ್ ನೀಡುತ್ತಿರುವುದು ಸಂತೋಷದ ಸಂಗತಿ ಎಂದರು.
ಮೇಟಿಕುಪ್ಪೆ ಉಪವಿಭಾಗದ ಎಸಿಎಫ್ ಮಧು, ಅಂತರಸಂತೆ ವನ್ಯಜೀವಿ ವಲಯದ ಆರ್‌ಎಫ್‌ಒ ಸಿದ್ದರಾಜು, ಡಿ.ಬಿ.ಕುಪ್ಪೆ ಆರ್‌ಎಫ್‌ಒ ಹನುಮಂತರಾಜು, ಮೇಟಿಕುಪ್ಪೆ ಆರ್‌ಎಫ್‌ಒ ರಶ್ಮಿ, ಡಿಆರ್‌ಎಫ್‌ಒ ವಿನೋದ್‌ರಾಜ್ ಇತರ ಅಧಿಕಾರಿಗಳು, 3 ವಲಯದ ನೂರಾರು ಸಿಬ್ಬಂದಿ ಇದ್ದರು.