

ಹಾಸನ: ಅರಣ್ಯ ಇಲಾಖೆಯಲ್ಲಿ ಕರ್ತವ್ಯದ ಅವಧಿಯಲ್ಲಿ ವೀರ ಮರಣವನ್ನಪ್ಪಿದ ದಿವಂಗತರ ಸ್ಮರಣೆಯನ್ನು ಮಾಡುತ್ತಿದ್ದು ಅಂತಹವರಿಗೆ ನಮನಗಳನ್ನು ತಿಳಿಸುತ್ತೇನೆ. ಪರಿಸರ ಹಾಗೂ ಅರಣ್ಯ ಮಾತೆಯನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದ್ದು, ನೀವು ಅತಿಜಾಗರೂಕರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ಅರಣ್ಯ ಇಲಾಖೆ ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಅರಣ್ಯ ಭವನದ ಆವರಣದಲ್ಲಿ ಬುಧವಾರ ನಡೆದ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಮರಣವನ್ನಪ್ಪಿದ ದಿವಂಗತರ ಸ್ಮರಣೆಯ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಕೃತಿ ಮಡಿಲಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ಮಾಡಲು ದೇವರು ನಿಮಗೆ ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಶುಭ ಆರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್ ಮಾತನಾಡಿ, ನಾಡಿನ ಅರಣ್ಯ ಸಂಪತ್ತನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಅರಣ್ಯ ವೀರ ಯೋಧರಿಗೆ ನಮನಗಳನ್ನು ಸಲ್ಲಿಸಿ ಅರಣ್ಯ ಹುತಾತ್ಮರ ದಿನದ ಮಹತ್ವ ಹಾಗೂ ಇತಿಹಾಸವನ್ನು ತಿಳಿಸಿದರು.
ವೀರ ಮರಣವನ್ನಪ್ಪಿದ ಹುತಾತ್ಮರಿಗೆ ಹಾಸನ ಜಿಲ್ಲಾ ಸಶಶ್ತ್ರ ಮೀಸಲು ಪಡೆಯ ತುಕಡಿ ಸಿಬ್ಬಂದಿ ಪೆರೇಡ್‌ನೊಂದಿಗೆ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿದರು. ಹಾಗೂ 2 ನಿಮಿಷ ಮೌನಾಚರಣೆ ಆಚರಿಸಿ, ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಇಡುವ ಮೂಲಕ ಗೌರವವನ್ನು ಸಲ್ಲಿಸಲಾಯಿತು. ಇದೆ ವೇಳೆ ಹಾಸನ ಅರಣ್ಯ ವಿಭಾಗದ ಹಸಿರು ಸೈನಿಕರು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಗಸ್ತು ಅರಣ್ಯ ಪಾಲಕರು, ಅರಣ್ಯ ವೀಕ್ಷಕರು ಹಾಗೂ ಕಚೇರಿ ಸಿಬ್ಬಂದಿ ಸೇರಿ ಒಟ್ಟು 40 ಜನರು ರಕ್ತದಾನ ಮಾಡಿದರು.
ಈ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಪಂ ಸಿಇಒ ಡಾ.ಬಿ.ಆರ್.ಪೂರ್ಣಿಮಾ, ಹಿರಿಯ ಸಿವಿಲ್ ನ್ಯಾಯಾಧೀಶರಾ ಜಿ.ಕೆ. ದಾಕ್ಷಾಯಿಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಕಿತ್ ಮೀನಾ, ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಡಿ.ಟಿ. ಪ್ರಸನ್ನ ಇತರರಿದ್ದರು.