

ಎನ್.ಆರ್.ಪುರ: ತಾಲೂಕಿನ ಅರಳಿಕೊಪ್ಪ , ಬಾಳೆ ಗ್ರಾಮಗಳ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಡ್ರೋನ್ ಮೂಲಕ ಫೈರ್ ರಿಸ್ಕ್ ಏರಿಯಾ (ಬೆಂಕಿ ಬೀಳುವ ಸಾಧ್ಯತೆ ಪ್ರದೇಶ) ಸಮೀಕ್ಷೆ ಮಾಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿರುವುದು ಆನೆ ಧಾಮ ಗುರುತಿಸಲು ಎಂದು ಆರೋಪಿಸಿ ಅಧಿಕಾರಿಗಳ ಜತೆ ಮಲೆನಾಡು ರೈತ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ವಾಗ್ವಾದಕ್ಕಿಳಿದರು.
ಸರ್ವೇ ನಡೆಸುತ್ತಿದ್ದ ಅಧಿಕಾರಿಗಳ ವಿರುದ್ಧ ಮಲೆನಾಡು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎನ್.ಎಂ.ನಾಗೇಶ್ ಹರಿಹಾಯ್ದರು. ಕಾಡನ್ನು ರಕ್ಷಿಸಿಕೊಂಡು ಬರುತ್ತಿರುವುದು ರೈತರೇ ಹೊರತು ಅರಣ್ಯ ಇಲಾಖೆ ಮಾತ್ರವಲ್ಲ. ರೈತರಿಗೆ ಮಾಹಿತಿ ನೀಡದೆ, ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡದೆ ಏನು ಸರ್ವೇ ಮಾಡುತ್ತಿದ್ದೀರಾ, ಗುಪ್ತವಾಗಿ ಸರ್ವೇ ಮಾಡಿ ಬಫರ್ ಜೋನ್, ಸೆಕ್ಷನ್ (4) ನಂಥ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಬದುಕಲ್ಲಿ ಚೆಲ್ಲಾಟವಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಡಿಗೆ ಬೆಂಕಿ ಬಿದ್ದಾಗ ರೈತರು ನಂದಿಸುತ್ತಾರೆ. ಆನೆಗಳ ಹಾವಳಿ ತಡೆಗೆ ಸೋಲಾರ್ ಫೆನ್ಸಿಂಗ್‌ನಿಂದ ಸಾಧ್ಯವಿಲ್ಲ. ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಮಾಡಿದರೆ ಮಾತ್ರ ಕಾಡಾನೆ ಹಾವಳಿ ತಡೆಯಲು ಸಾಧ್ಯವಾದೀತು ಎಂದರು.
ಭದ್ರಾ ಅಣೆಕಟ್ಟು ನಿರ್ಮಿಸಿ ಮಲೆನಾಡಿನ ಅರ್ಧ ಭಾಗದಷ್ಟು ರೈತರಿಗೆ, ಜನರಿಗೆ ತೊಂದರೆ ನೀಡಲಾಗಿದೆ. ಬ್ರಿಟಿಷರ ಕಾಲದ ಆದೇಶವನ್ನು ತಂದು ಅಭಯಾರಣ್ಯ ಎಂದು ಸಮೀಕ್ಷೆ ಮಾಡಲಾಗುತ್ತಿದೆ. ಇಲಾಖೆಯವರು ಸಮೀಕ್ಷೆ ನಡೆಸಿ ಆನೆ ಧಾಮ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಮಾತನಾಡಿ, ಬೆಂಕಿ ಬೀಳುವ ಸಂಭವದ ಕುರಿತು ಸಮೀಕ್ಷೆ ಮಾಡುತ್ತಿದ್ದೇವೆ ಎಂದರು. ಇದನ್ನು ಒಪ್ಪದ ಸಮಿತಿ ಸದಸ್ಯರು ಸಂಗಮೇಶ್ವರ ಪೇಟೆ ಭದ್ರಾ ಅಭಯಾರಣ್ಯದ ವಲಯ ಅರಣ್ಯಾಧಿಕಾರಿ ಗೌರವ್ ಜತೆ ಮಾತಿನ ಚಕಮಕಿ ನಡೆಸಿದರು.
ಆರ್‌ಎಫ್‌ಒ ಗೌರವ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗದ ಅರಣ್ಯ ಪ್ರದೇಶ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಫೈರ್ ರಿಸ್ಕ್ ಏರಿಯಾ (ಬೆಂಕಿ ಬೀಳುವ ಸಾಧ್ಯತೆ) ತೇವಾಂಶ ಎಷ್ಟಿದೆ ಎಂದು ಸಮೀಕ್ಷೆ ಮಾಡಲು ಹೋಗಿದ್ದೆವು. ಆದರೆ ಆನೆ ಧಾಮ ಮಾಡಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಪ್ಪು ತಿಳಿದಿದ್ದಾರೆ ಎಂದು ಹೇಳಿದರು.