

ಚಿಟಗುಪ್ಪ: ಅರಣ್ಯ ಸಂಪತ್ತು ಇಂದು ನಶಿಸಿ ಹೋಗುತ್ತಿದ್ದು, ಇದರ ಸಂರಕ್ಷಣೆ ಮಾಡುವುದು ಇಂದಿನ ನಾಗರಿಕರ ಆದ್ಯ ಕರ್ತವ್ಯವಾಗಿದೆ ಎಂದು ಸಾಹಿತಿ ಸಂಗಮೇಶ ಜವಾದಿ ಹೇಳಿದರು.
ಇಟಗಾ ಗ್ರಾಮದ ಶ್ರೀ ಚೆನ್ನಮಲ್ಲೇಶ್ವರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಗಳವಾರ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರಿಸರ ಸಂರಕ್ಷಣೆಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡು ವನ್ಯ ಸಂಪತ್ತು ಸಂರಕ್ಷಣೆ ಮಾಡುವಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ವಿಶೇಷವಾಗಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಆಯೋಜಿಸಿ ಪ್ರತಿಯೊಬ್ಬರಿಗೂ ಸಸಿ ವಿತರಿಸಿ, ಅವುಗಳ ಪಾಲನೆ ಮಾಡುವ ಮುಖಾಂತರ ಪರಿಸರ ಸಂರಕ್ಷಣೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ಜಿಲ್ಲಾ ಸದಸ್ಯ ಅಸ್ಲಾಂಮಿಯಾ ಮಾತನಾಡಿ, ಸಸಿ ನೆಟ್ಟು ದೇಶ ಉಳಿಸಿ, ದೇಶ ಉಳಿದರೆ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ. ಎಲ್ಲರೂ ತಪ್ಪದೇ ಸಸಿ ನೆಟ್ಟು ಅವುಗಳ ಪಾಲನೆ ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯರಾದ ಧೂಳಯ್ಯ ಸ್ವಾಮಿ ಮಾತನಾಡಿದರು. ತಾಲೂಕಿನ ಯೋಜನಾಧಿಕಾರಿ ಬಸವರಾಜ ಪ್ರಾಸ್ತಾವಿಕ ಮಾತನಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನರಸಪ್ಪ ಪತ್ಮಾಪುರ, ಮುಖಂಡರಾದ ಶ್ರೀನಿವಾಸ ರೆಡ್ಡಿ, ವಲಯ ಮೇಲ್ವಿಚಾರಕ ರಾಜಶೇಖರ ಇತರರಿದ್ದರು. ಕೃಷಿ ಮೇಲ್ವಿಚಾರಕ ಸಿದ್ದು ಪೂಜಾರಿ ನಿರೂಪಣೆ ಮಾಡಿ ವಂದಿಸಿದರು.