

ಅರಸೀಕೆರೆ: ಅರಣ್ಯ ಸಂಪತ್ತಿನ ರಕ್ಷಣೆಗೆ ನಾಗರಿಕರ ಸಹಕಾರ ಅಗತ್ಯವಿದೆ ಎಂದು ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಹೇಳಿದರು.
ತಾಲೂಕಿನ ಅಗ್ಗುಂದ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾಳ್ಗಿಚ್ಚು ತಂದೊಡ್ಡುವ ಅಪಾಯ ಹಾಗೂ ನಿಯಂತ್ರಣ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇಸಿಗೆ ದಿನಗಳಲ್ಲಿ ಗಿಡ,ಮರಗಳ ಎಲೆಗಳು ಉದರಿದರೆ, ಹುಲ್ಲು ಒಣಗುವುದು ಸ್ವಾಭಾವಿಕ. ಇಂತಹ ಸನ್ನಿವೇಶದಲ್ಲಿ ಬೆಂಕಿ ತಗುಲಿದರೆ ಸಸ್ಯ, ಪ್ರಾಣಿ ಸಂಪತ್ತು ನಾಶವಾಗಲಿದೆ ಎಂದರು.
ಜಾನುವಾರು ಮೇಯಿಸಲು ಕಾಡಿಗೆ ತೆರಳುವ ಕೆಲವರು ಬೆಂಕಿ ಹಚ್ಚಿ ವಿಕೃತಿ ಮೆರೆಯುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಕೃತ್ಯ ತಡೆಯುವ ಉದ್ದೇಶದಿಂದ ಹಿರೇಕಲ್ಲು ಗುಡ್ಡ, ರಾಮೇನಹಳ್ಳಿ, ಬಿಸ್ಲೆ ಕಲ್ಲು, ದೇಶಾಣಿ ಬೆಟ್ಟದಪುರ, ಜಾಜೂರು, ಚಿಕ್ಕಬೆಟ್ಟ, ಹಿಟ್ಟು ಕಲ್ಲು, ಹಿರೇಬೆಟ್ಟ, ಡಿ.ಎಂ. ಕುರ್ಕೆ ಮೀಸಲು ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಜನರಿಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ತಾಲೂಕಿನ ಆಯಕಟ್ಟಿನ ಭೂ ಪ್ರದೇಶದ ಅರಣ್ಯಗಳಲ್ಲಿ ಅತ್ಯಮೂಲ್ಯವಾದ ಔಷಧೀಯ ಸಸ್ಯಗಳು, ಬೆಲೆ ಬಾಳುವ ಗಿಡ ಮರಗಳಿವೆ. ಚಿರತೆ, ಕರಡಿ, ಜಿಂಕೆ, ನವಿಲು, ಕಡವೆ ಇನ್ನಿತರೆ ವನ್ಯ ಪ್ರಾಣಿಗಳ ಆವಾಸಸ್ಥಾನವಾಗಿದೆ. ಸದ್ಯ ಬೇಸಿಗೆ ಇರುವುದರಿಂದ ಅಮೂಲ್ಯವಾದ ಮೀಸಲು ಅರಣ್ಯ ಪ್ರದೇಶವನ್ನು ಬೆಂಕಿಯಿಂದ ರಕ್ಷಣೆ ಮಾಡುವುದು ಮತ್ತು ಬೆಂಕಿ ಬೀಳದಂತೆ ಎಚ್ಚರ ವಹಿಸುವುದು ಎಲ್ಲರ ಹೊಣೆಗಾರಿಕೆ ಎಂಬುದನ್ನು ಮರೆಯಬಾರದು ಎಂದು ಹೇಮಂತ್ ಕುಮಾರ್ ಮನವಿ ಮಾಡಿದರು.
ಉಪ ಅರಣ್ಯ ಸಂರಕ್ಷಣ ಅಧಿಕಾರಿ ಖಲಂದರ್ ಮಾತನಾಡಿ, ಪ್ರಕೃತಿ ಮಹತ್ವ ತಿಳಿಯದೇ ಗಿಡ, ಮರಗಳ ಮತ್ತು ಪ್ರಾಣಿ ಪಕ್ಷಿಗಳ ಮೇಲೆ ಪ್ರಹಾರ ಮಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬೆಂಕಿ ಬಿದ್ದಾಗ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ ಮತ್ತು ಪರಿಸರ ಮಾಲಿನ್ಯವಾಗುತ್ತಿದೆ. ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿ ನಾಡಿನತ್ತ ಮುಖ ಮಾಡುತ್ತಿವೆ. ಅರಣ್ಯದಲ್ಲಿ ಬೆಂಕಿ ಕಂಡ ಕೂಡಲೇ ಸಮೀಪದ ಅರಣ್ಯ ಇಲಾಖೆಗೆ ತಿಳಿಸುವ ಜತೆಗೆ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ಸಹಕರಿಸಬೇಕು. ಗುಡ್ಡ, ಅರಣ್ಯ ಮಾರ್ಗದಲ್ಲಿ ತೆರಳುವಾಗ ಬೀಡಿ, ಸಿಗರೇಟ್ ಸೇದಿ ಎಸೆಯಬಾರದು ಎಂದು ಸಲಹೆ ನೀಡಿದರು.
ಹೊಯ್ಸಳ ಜನಪದ ಕಲಾತಂಡ ಕಲಾವಿದರು ಜಾಗೃತಿ ಜಾಥಾದೊಂದಿಗೆ ಬೀದಿ ನಾಟಕದ ಮೂಲಕ ಕಾಳ್ಗಿಚ್ಚಿನ ಕುರಿತು ಜಾಗೃತಿ ಮೂಡಿಸಿದರು. ಉಪವಲಯ ಅರಣ್ಯ ಅಧಿಕಾರಿಗಳಾದ ಪುನೀತ್, ದಿಲೀಪ್, ಕೃಷ್ಣಮೂರ್ತಿ ರಮೇಶ್ ಇತರರಿದ್ದರು.