ಅರಣ್ಯ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು

24MDG1
Published on

ಮುಂಡರಗಿ: ಮನುಷ್ಯ, ಪ್ರಾಣಿ, ಪಕ್ಷಿಗಳು ಜೀವಿಸಲು ಅರಣ್ಯ ಪ್ರದೇಶ ಅತ್ಯವಶ್ಯ. ಅದರ ಸಂರಕ್ಷಣೆ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗದಗ ಅರಣ್ಯ ವಿಭಾಗ, ಅಗ್ನಿ ಶಾಮಕ ದಳ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಬೆಂಕಿಯಿಂದ ಅರಣ್ಯ ರಕ್ಷಣೆ ಕಾರ್ಯಾಗಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಕಪ್ಪತಗುಡ್ಡವನ್ನು ಯಾತ್ರಿಕರ ದರ್ಶನ ಸ್ಥಳವನ್ನಾಗಿಸಬೇಕು. ಅಲ್ಲಿನ ವಿಶೇಷ ಸ್ಥಳಗಳನ್ನು ಅಭಿವೃದ್ಧಿಪಡಿಸಬೇಕು. ಅರಣ್ಯ ಸಂಪತ್ತು ನಾಶವಾದರೆ ಬದುಕುವುದು ಕಷ್ಟವಾಗುತ್ತದೆ. ಭೂಮಿಯ ಅಸಮತೋಲನ ಸರಿಪಡಿಸಲು ಅರಣ್ಯ ಪ್ರದೇಶ ಸಹಕಾರಿ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಮಾತನಾಡಿ, ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಬೆಂಕಿ ಬೀಳದಂತೆ ಶ್ರಮ ವಹಿಸಬೇಕು. ಬೆಂಕಿ ಬೀಳುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಗಿಡ ಮರಗಳು ಬೆಳೆಯುವುದಕ್ಕೆ ಕಷ್ಟವಾಗುತ್ತದೆ. ಅರಣ್ಯ ಬೆಳೆಸುವುದಕ್ಕೆ ಸುದೀರ್ಘ ಅವಧಿ ತೆಗೆದುಕೊಳ್ಳುತ್ತದೆ. ಅರಣ್ಯವನ್ನು ಸಂರಕ್ಷಣೆ ಮಾಡುವುದರಿಂದ ಮುಂದಿನ ಪೀಳಿಗೆಗೆ ತುಂಬಾನೆ ಸಹಕಾರಿಯಾಗುತ್ತದೆ ಎಂದರು.

ಆರ್​ಎಫ್​ಒ ಎಸ್.ಎಂ. ಶಿವರಾತ್ರೇಶ್ವರಸ್ವಾಮಿ, ಪ್ರಾಚಾರ್ಯ ಎಂ.ಎನ್. ಹಲವಾಗಲಿ, ಜೆ.ಎ.ಪಿ.ಯು. ಕಾಲೇಜ್ ಪ್ರಾಚಾರ್ಯ ಸಿ.ಎಸ್. ಅರಸನಾಳ ಮಾತನಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಎಚ್. ಪರಿಮಳ, ಶಿರಹಟ್ಟಿ ಆರ್​ಎಫ್​ಒ ಸತೀಶ ಪೂಜಾರ, ಗದಗ ಆರ್​ಎಫ್​ಒ ಕಿರಣ ಅಂಗಡಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಪಿ. ಹೊಸಳ್ಳಿ, ಅಗ್ನಿ ಶಾಮಕ ದಳ ಅಧಿಕಾರಿ ಎಸ್.ಎಸ್. ಲಕ್ಷ್ಮೇಶ್ವರ ಉಪಸ್ಥಿತರಿದ್ದರು.

ಶಿವಪ್ರಸಾದ ಕುಬಸದ ಸ್ವಾಗತಿಸಿದರು. ಎಸ್.ಎಸ್. ಪೂಜಾರ ನಿರೂಪಿಸಿದರು. ಪ್ರಕಾಶ ಗಾಣಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net