

ಕೊಪ್ಪ: ಅರಣ್ಯ ರಕ್ಷಣೆ ಹಾಗೂ ವನ್ಯಜೀವಿಗಳ ರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಅರಣ್ಯ ರಕ್ಷಕರ ಪಾತ್ರ ಹೆಚ್ಚಿನದಾಗಿದೆ. ಇಲಾಖೆ ಹಾಗೂ ಸರ್ಕಾರ ಇವರ ಕಷ್ಟಕ್ಕೆ ಸ್ಪಂದಿಸಬೇಕು. ಹೆಚ್ಚು ಸೌಲಭ್ಯಗಳನ್ನು ನೀಡಬೇಕು ಎಂದು ಕೊಪ್ಪ ಜೆಎಂಎ್ಸಿ ನ್ಯಾಯಾಧೀಶೆ ಎಂ.ಎನ್.ನಂದಿನಿ ತಿಳಿಸಿದರು.
ಅರಣ್ಯ ವಿಭಾಗ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಾನು ಕೊಳ್ಳೆಗಾಲದಲ್ಲಿ ಕಾರ್ಯ ನಿರ್ವಹಿಸಿದ್ದೆ. ಆಗ ಅರಣ್ಯ ರಕ್ಷಕರ ಸಾವುಗಳು ಸಂಭವಿಸಿದ್ದನ್ನು ಕಂಡಿದ್ದೇನೆ. ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿದ್ದೇನೆ. ಕಡಿಮೆ ಸಂಬಳ ಜತೆಗೆ ಕುಟುಂಬವನ್ನು ಬಿಟ್ಟು ಬಂದು ಅರಣ್ಯ ಉಳಿವಿಗೆ ಕಷ್ಟಪಡುತ್ತಾರೆ ಎಂದು ತಿಳಿಸಿದರು.
ಮನುಷ್ಯರ ಅತಿಕ್ರಮದಿಂದ ಆನೆಗಳು ನಾಡಿಗೆ ಬರುವಂತಾಗಿದೆ. ಇದರಿಂದ ಅನಾಹುತಗಳು ಹೆಚ್ಚಾಗುತ್ತಿವೆ. ಅರಣ್ಯಒತ್ತುವರಿಗಳಿಗೆ ಇಲಾಖೆ ಅವಕಾಶ ನೀಡಬಾರದು. ಕಾಡು ಇನ್ನಷ್ಟು ಸಮದ್ಧಿಯಾಗಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಮಾತನಾಡಿ, ನ್ಯಾಯಾಲಯದಿಂದಾಗಿ ಅರಣ್ಯ ಇಲಾಖೆ ಹೆಚ್ಚು ಅರಣ್ಯ ಭೂಮಿ ಉಳಿಸಿಕೊಳ್ಳಲು ಸಹಕಾರಿಯಾಗಿದೆ. ಇಲಾಖೆ ಸಿಬ್ಬಂದಿ ಜತೆ ನ್ಯಾಯಾಂಗ ವ್ಯವಸ್ಥೆಯ ಸಹಕಾರ ಅಗತ್ಯವಾಗಿದೆ. ವನ್ಯಜೀವಿ ಹಾಗೂ ಮಾನವ ಸಂಘರ್ಷವನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇರಳದ ನ್ಯಾಯಾಲಯ ಮುಂದೆಬಂದಿದೆ ಎಂದು ಹೇಳಿದರು.
ಅರಣ್ಯ ಇಲಾಖೆ ಸಿಬ್ಬಂದಿ ನೆರವಿಗೆ ಇಲಾಖೆ ಸಿದ್ಧವಿದೆ. ಹಲವು ಯೋಜನೆಗಳನ್ನು ಸಹ ರೂಪಿಸಲಾಗಿದೆ. ರಾಜ್ಯ ಸರ್ಕಾರ ಅರಣ್ಯ ಇಲಾಖೆಗೆ ಪ್ರತ್ಯೇಕ ವಿಮೆ, ಇತರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಸಿದ್ಧಪಡಿಸುತ್ತಿದೆ ಎಂದರು.
ತಹಸೀಲ್ದಾರ್ ಲಿಖಿತಾ ಮೋಹನ್ ಮಾತನಾಡಿ, ಪಶ್ಚಿಮಘಟ್ಟ ಹಾಗೂ ಅರಣ್ಯ ಭೂಮಿಗಳ ರಕ್ಷಣೆಯಲ್ಲಿ ಅರಣ್ಯ ಇಲಾಖೆ ಪಾತ್ರ ಹೆಚ್ಚಿನದ್ದಾಗಿದೆ. ಇದಕ್ಕಾಗಿ 64 ಜನರು ಪ್ರಾಣತ್ಯಾಗ ಮಾಡಿದ್ದಾರೆ. ನಾವು ಆರೋಗ್ಯವಾಗಿರಲು ಕಾಡು ಬೇಕು. ಕಾಡನ್ನು ಸುರಕ್ಷಿತವಾಗಿಡಲು ಅರಣ್ಯ ಇಲಾಖೆ ಸಿಬ್ಬಂದಿ ಬೇಕು ಎಂದು ತಿಳಿಸಿದರು.
ಹುತಾತ್ಮ ಅಧಿಕಾರಿ ಮತ್ತು ಸಿಬ್ಬಂದಿಯ ಪಟ್ಟಿ ವಾಚನಮಾಡಿ ಗೌರವ ಸಲ್ಲಿಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬು ರಾಜೇಂದ್ರ ಪ್ರಸಾದ್, ಕೊಪ್ಪ ವಲಯ ಅರಣ್ಯಾಧಿಕಾರಿ ಜಿ.ಟಿ.ರಂಗನಾಥ್, ಎನ್.ಆರ್.ಪುರ ವಲಯ ಅರಣ್ಯಾಧಿಕಾರಿ ಪ್ರವೀಣ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಟದ ಅಧ್ಯಕ್ಷ ಜಿನೇಶ್ ಇರ್ವತ್ತೂರ್ ಇತರರಿದ್ದರು.