ಅರಣ್ಯ ಭೂಮಿ ಒತ್ತುವರಿ

01-GPT-2A
Published on

ಗುಂಡ್ಲುಪೇಟೆ: ಬಗರ್ ಹುಕುಂ ಜಮೀನು ಹಕ್ಕುಪತ್ರ ಪಡೆದುಕೊಳ್ಳಲು ಸರ್ಕಾರ ಅವಧಿ ವಿಸ್ತರಣೆ ಮಾಡಿದ ಪರಿಣಾಮ ಕಾಡಂಚಿನ ಬೆಟ್ಟಗುಡ್ಡಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮರಗಿಡಗಳನ್ನು ಕತ್ತರಿಸಿ ಅತಿಕ್ರಮಿಸುತ್ತಿದ್ದರೂ ಸಂಬಂಧಪಟ್ಟವರು ಸುಮ್ಮನಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹಿಂದಿನಿಂದಲೂ ಉಳುಮೆ ಮಾಡುತ್ತಿದ್ದ ಸರ್ಕಾರಿ ಭೂಮಿಯ ಹಕ್ಕುಪತ್ರಕ್ಕಾಗಿ ತಾಲೂಕಿನಲ್ಲಿ ಸುಮಾರು 1992ರಲ್ಲಿ 4 ಸಾವಿರ ಜನರು ಫಾರಂ 53 ಹಾಗೂ 57ರ ಅಡಿ ಅರ್ಜಿ ಸಲ್ಲಿಸಿದ್ದರು. ಶಾಸಕರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಬಗರ್ ಹುಕುಂ ಸಮಿತಿ ಕಳೆದ ಮೂರು ವರ್ಷಗಳಿಂದ ಮೇಲಿಂದ ಮೇಲೆ ಸಭೆ ನಡೆಸಿ ಅರ್ಜಿಗಳನ್ನು ಪರಿಶೀಲಿಸಿದೆ. ಕಂದಾಯ, ಭೂಮಾಪನಾ, ಅರಣ್ಯ ಇಲಾಖೆ ಅಧಿಕಾರಿಗಳ ತಂಡದೊಡನೆ ಸ್ಥಳಕ್ಕೆ ತೆರಳಿ ಈ ಅರ್ಜಿಗಳ ವಾಸ್ತವಾಂಶ ಪರಿಶೀಲಿಸಿದೆ. ಇವುಗಳಲ್ಲಿ ಗೋಮಾಳ ಹಾಗೂ ಅರಣ್ಯ ಪ್ರದೇಶ ಹೊರತುಪಡಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಸುಮಾರು 2 ಸಾವಿರ ರೈತರನ್ನು ಗುರುತಿಸಿದೆ. ಈ ಫಲಾನುಭವಿಗಳಿಗೆ ಮೊದಲನೇ ಹಂತದಲ್ಲಿ ಹಕ್ಕುಪತ್ರ ವಿತರಣೆಗೆ ಸಿದ್ಧತೆ ನಡೆದಿದೆ.


ಈ ಸಂದರ್ಭದಲ್ಲಿ ಸಲ್ಲಿಸಿದ್ದ ಅರ್ಜಿಗಳು ಪುರಸ್ಕೃತವಾಗದವರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಅಲ್ಲದೇ, ಸರ್ಕಾರ ಫಾರಂ 53 ಹಾಗೂ 57ರ ಅಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಇದರಿಂದ ತಾಲೂಕಿನ ಕಾಡಂಚಿನ ಅರಣ್ಯ ಪ್ರದೇಶದ ಸುತ್ತಮುತ್ತ ಇರುವ ಸರ್ಕಾರಿ ಭೂಮಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಸಮತಟ್ಟು ಮಾಡಲಾಗುತ್ತಿದೆ. ತಾವು ಹಿಂದಿನಿಂದಲೂ ವ್ಯವಸಾಯ ಮಾಡುತ್ತಿರುವುದಾಗಿ ನಂಬಿಸಲು ಸುತ್ತಲೂ ಫೆನ್ಸಿಂಗ್ ಅಳವಡಿಸಲಾಗುತ್ತಿದೆ.


ತಾಲೂಕಿನ ಮಂಚಹಳ್ಳಿ, ಆಲತ್ತೂರು, ಕುರುಬರಹುಂಡಿ, ಮದ್ದೂರು, ಗೋಪಾಲಸ್ವಾಮಿ ಬೆಟ್ಟ ಹಾಗೂ ಕುಂದಕೆರೆ ವಲಯಕ್ಕೆ ಸೇರಿದ ಕಾರೇಮಾಳ, ಮಂಗಲ, ಚಿಕ್ಕೆಲಚೆಟ್ಟಿ ಮುಂತಾದ ಪ್ರದೇಶಗಳಲ್ಲಿ ಕಂದಾಯ ಇಲಾಖೆಗೆ ಸೇರಿದ ಬೆಟ್ಟಗುಡ್ಡಗಳನ್ನೂ ಬಿಡದೆ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.


ಅಕ್ರಮ- ಸಕ್ರಮ ಯೋಜನೆಯಲ್ಲಿ ಭೂರಹಿತ ಹಾಗೂ ಬಡವರಿಗೆ ಭೂಮಿ ನೀಡುವ ಬದಲು ಎಲ್ಲಿಂದಲೋ ಬಂದವರು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹೊಂದಿರುವವರಿಗೆ ಅವಕಾಶವಾಗುತ್ತಿದೆ. ಇದರ ಲಾಭ ಪಡೆಯಲು ಬಂಡೀಪುರ ಕಾಡಂಚಿನ ಸರ್ಕಾರಿ ಭೂಮಿಯಲ್ಲಿ ಬೆಳೆದಿರುವ ಗಿಡಗಂಟಿ, ಮರಗಿಡಗಳನ್ನು ಕತ್ತರಿಸುತ್ತಿದ್ದರೂ ಅರಣ್ಯ ಇಲಾಖೆ ಅಥವಾ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇದರ ಬದಲು ಆಯಾ ಗ್ರಾಮಗಳ ಭೂರಹಿತರಿಗೆ ಹಕ್ಕುಪತ್ರ ಕೊಡುವಂತಾಗಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈಗಾಗಲೇ ಗೋಮಾಳ ಹಾಗೂ ಅರಣ್ಯ ಭೂಮಿ ಹೊರತುಪಡಿಸಿ ಉಳಿದ ಅರ್ಹ ಫಲಾನುಭವಿಗಳನ್ನು ಗುರ್ತಿಸಿದ್ದು, ಶೀಘ್ರದಲ್ಲಿಯೇ ಹಕ್ಕುಪತ್ರ ವಿತರಿಸಲಾಗುವುದು. ಅರಣ್ಯ ಸಮೀಪದ ಸರ್ಕಾರಿ ಭೂಮಿಯೂ ಅರಣ್ಯ ಇಲಾಖೆಗೆ ಸೇರಿಕೊಳ್ಳಲಿದೆ. ಆದ್ದರಿಂದ ಅತಿಕ್ರಮಣ ತೆರವಿಗೆ ಸೂಚಿಸಲಾಗುವುದು.
ಸಿ.ಎಸ್.ನಿರಂಜನಕುಮಾರ್ ಶಾಸಕ, ಬಗರ್ ಹುಕುಂ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net