

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಅರಣ್ಯ ಹಾಗೂ ವನ್ಯಜೀವಿಗಳು ನಶಿಸುವ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರಿಗೂ ಅರಣ್ಯ ಕಾಯ್ದೆಗಳ ಅರಿವು ಅಗತ್ಯವಾಗಿದೆ ಎಂದು ಸಿಐಡಿ ಉಪ ನಿರೀಕ್ಷರಾದ ಯಾಸ್ಮೀನ್ ತಾಜ್ ಹೇಳಿದರು.
ತಾಲೂಕಿನ ವೆಂಕಟಯ್ಯನಛತ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವತಿಯಿಂದ ಶನಿವಾರ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಅರಣ್ಯ ಹಾಗೂ ವನ್ಯಜೀವಿಗಳು ಮನುಕುಲದ ಸಂಪತ್ತಾಗಿದೆ. ಇದರ ಸಮೃದ್ಧಿ ಪರಿಸರದಲ್ಲಿ ಸಮತೋಲವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆ. ಈ ಮೂಲಕ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದಬಹುದು. ಆದರೆ, ಈ ಬಗ್ಗೆ ಕೆಲವರು ತಿಳಿಯದೆ ಸ್ವ-ಹಿತದೃಷ್ಟಿಯಿಂದ ಅರಣ್ಯ ಹಾಗೂ ವನ್ಯಜೀವಿಗಳು ನಶಿಸುವ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಕಾನೂನು ಬಾಹಿರ ಚಟುವಟಿಕೆಯಾಗಿದ್ದು, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅರಣ್ಯ ಕಾಯ್ದೆ ನಿಯಮಗಳಿಂದ ಇತ್ತೀಚಿನ ದಿನಗಳಲ್ಲಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತಿದೆ ಎಂದು ತಿಳಿಸಿದರು.
ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಅರಣ್ಯಗಳನ್ನು ರಕ್ಷಿಸಲು ಮತ್ತು ಅರಣ್ಯ ನಾಶವನ್ನು ತಡೆಯಲು ಜಾರಿಗೆ ತರಲಾಗಿದೆ. ಯಾವುದೇ ಕಾರಣಕ್ಕೂ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಯಾವುದೇ ಪ್ರಾಣಿಗಳನ್ನು ಬೇಟೆಯಾಡುವುದು ಅಥವಾ ಹಿಂಸಿಸುವುದು ಅಪರಾಧವಾಗಿದ್ದು, ಅರಣ್ಯ ಮತ್ತು ವನ್ಯಜೀವಿಗಳು ಪರಿಸರದ ಅವಿಭಾಜ್ಯ ಅಂಗವಾಗಿದೆ.
ಸಾಮಾನ್ಯ ಜನರು ತಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಕೈ ಚೀಲಗಳನ್ನು ಬಳಸುತ್ತಿದ್ದಾರೆ. ವಿದ್ಯಾರ್ಥಿಗಳು ಅರಣ್ಯ ರಕ್ಷಣೆ ಮತ್ತು ಅರಣ್ಯ ಕಾಯ್ದೆಗಳ ಬಗ್ಗೆ ತಿಳಿದುಕೊಂಡು, ಸುತ್ತಮುತ್ತಲಿನ ಇತರ ಜನರಿಗೂ ಸಹ ಅರಿವು ಮೂಡಿಸಬೇಕು. ಭವಿಷ್ಯದಲ್ಲಿ ಉತ್ತಮ ಪರಿಸರವನ್ನು ನಿರ್ಮಿಸಲು ಕೈಜೋಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸಿ.ಕೇಶವನ್, ಸಿಐಡಿ ಸಿಬ್ಬಂದಿಗಳಾದ ಮಾದೇಶ್ ಕುಮಾರ್, ವೀರಭದ್ರಪ್ಪ, ಶಿವಪ್ರಸಾದ್, ರಾಜು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.