

ಚಾಮರಾಜನಗರ : ಹೊಸದಾಗಿ ಜಾರಿಯಾದ ಹಲವು ಅರಣ್ಯ ಕಾನೂನುಗಳಿಂದ ಸೋಲಿಗರು, ಆದಿವಾಸಿಗಳ ಅಭಿವೃದ್ಧಿಯಲ್ಲಿ ತೊಡಕು ಉಂಟಾಗಿದೆ ಎಂದು ಕೊಳ್ಳೇಗಾಲ ಶಾಸಕ ಎಂ.ಆರ್.ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ 29ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆದಿವಾಸಿಗಳ ಅಭಿವೃದ್ಧಿಗಾಗಿ ನಮ್ಮ ತಂದೆ ಬಿ.ರಾಚಯ್ಯ ಶಾಸಕರಾಗಿದ್ದ ಅವಧಿಯಲ್ಲಿ ಬೂದಿಪಡಗದ ರಂಗಸಂದ್ರದಲ್ಲಿ ಆಶ್ರಮ ಶಾಲೆಯನ್ನು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಂದ ಉದ್ಘಾಟನೆ ಮಾಡಿಸಿದ್ದರು. ಈ ಭಾಗದಲ್ಲಿ ಹಲವು ಹೊಸ ಪೋಡುಗಳನ್ನು ನಿರ್ಮಿಸಿದರು. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಕಾನೂನುಗಳು ಬಂದ ಪರಿಣಾಮ ಅರಣ್ಯ ವ್ಯಾಪ್ತಿಯಲ್ಲಿ ವಾಸಿಸುವ ಸೋಲಿಗರಿಗೆ ಮನೆಗಳ ನಿರ್ಮಾಣ, ಮೂಲಸೌಕರ್ಯಗಳನ್ನು ಒದಗಿಸಿ ಕೊಡುವಲ್ಲಿ ತೊಂದರೆಯಾಗುತ್ತಿದೆ. ಅಧಿಕಾರಿಗಳು ದೂರದೃಷ್ಟಿಯ ಆಲೋಚನೆ ಮಾಡಿ ಯೋಜನೆಗಳನ್ನು ರೂಪಿಸುವ ಮೂಲಕ ಸೋಲಿಗರ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದರು.
ಅರಣ್ಯದಲ್ಲಿ ವಾಸಿಸುವ ಆದಿವಾಸಿ ಸೋಲಿಗರು ಅಭಿವೃದ್ಧಿ ಹೊಂದಲು ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಸರ್ಕಾರವು ಕೂಡ ಆದಿವಾಸಿಗಳ ಶಿಕ್ಷಣಕ್ಕೆ ಒತ್ತು ನೀಡಿದ್ದು, ಅನೇಕ ಗಿರಿಜನ ಆಶ್ರಮ ಶಾಲೆಗಳನ್ನು ತೆರೆದಿದೆ. ಶಿಕ್ಷಣದ ಜತೆಗೆ ಪೂರ್ವಜರ ಕಲೆ, ಸಂಸ್ಕೃತಿಯನ್ನು ಸಹ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಲಿಗರು ವಾಸ ಮಾಡುತ್ತಿದ್ದಾರೆ. ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸೋಲಿಗರಲ್ಲಿ ಆರ್ಥಿಕ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು. ಸೋಲಿಗರಿಗೆ ಶಿಕ್ಷಣ ಕೊಡಿಸುವ ಜತೆಗೆ ಅವರು ವಾಸಿಸುವ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದರು.
ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಅಧಿಕಾರಿ ನವೀನ್ ಮಠ, ಬೆಂಗಳೂರಿನ ಇನ್ಸಿಟಿಟ್ಯೂಟ್ ಆಫ್ ಪಬ್ಲಿಕ್ ನಿರ್ದೇಶಕ ಡಾ.ಎನ್.ಎಸ್.ಪ್ರಶಾಂತ್, ಸೋಲಿಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಜಡೇಸ್ವಾಮಿ, ತಾಲೂಕು ಅಧ್ಯಕ್ಷ ಕೋಣೂರೇಗೌಡ, ದೊಡ್ಡಸಿದ್ದಯ್ಯ, ದಾಸೇಗೌಡ, ಗಿರಿಜನ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಮಾದಯ್ಯ, ಮುಖಂಡ ಮುತ್ತಯ್ಯ, ಕೇತಮ್ಮ, ಡಾ.ಸಿ.ಮಾದೇಗೌಡ, ಶಿವಣ್ಣ, ಚಂದ್ರಪ್ಪ, ಭವ್ಯ, ಜಾರ್ಜ್, ವಿಜಿಕೆಕೆ ವೈದ್ಯೆ ಡಾ.ತಾಣ್ಯ ಉಪಸ್ಥಿತರಿದ್ದರು.