

ಹಾಸನ: ರೈತರ ಭೂಮಿಯನ್ನು ಅರಣ್ಯ ಇಲಾಖೆಯವರು ನಮ್ಮ ಭೂಮಿ ಎಂದು ಹೇಳಿ ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದ್ದು, ಅರಣ್ಯ ಸಚಿವರು ಇತ್ತ ಕಡೆ ಗಮನ ಕೊಟ್ಟು ರೈತರ ಭೂಮಿ ಉಳಿಸುವ ಕೆಲಸ ಮಾಡಬೇಕು ಎಂದು ಶನಿವಾರ ಜಿಲ್ಲಾ ಅರಣ್ಯ ಭವನದ ಮುಂದೆ ನೂರಾರು ಜನ ರೈತರು ಪ್ರತಿಭಟಿಸಿದಲ್ಲದೇ ಸ್ಥಳದಲ್ಲೆ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ ಸುದ್ದಿಗಾರರೊಂದಿಗೆ ಮಾತನಾಡಿ, ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿ ನೀಲಗಿರಿ ಕಾವಲ್‌ನ 26 ಹಳ್ಳಿಗಳಿಗೆ ಸೇರಿದ 4486 ಎಕರೆ ಜಮೀನನ್ನು ನೂರಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರಲಾಗುತ್ತಿದೆ. ನಮಗೆ ಸರ್ಕಾರದಿಂದ 1962, 63, 64ರಂದು ಮಂಜೂರಾತಿ ಮಾಡಿ ಕೊಟ್ಟಿದೆ. ನಾವು ಈ ಜಮೀನಿನ ಮೇಲೆ ಬ್ಯಾಂಕಿನಿಂದ ಸಾಲವನ್ನು ಪಡೆದಿದ್ದೇವೆ. ಪ್ರತಿ ವರ್ಷ ಕಂದಾಯ ಕಟ್ಟುತ್ತಿದ್ದೇವೆ ಎಂದು ತಿಳಿಸಿದರು.
ಈ ಜಮೀನಿನಲ್ಲಿ ಮನೆಗಳು, ತೆಂಗಿನ ತೋಟ, ಅಡಿಕೆ, ಕಾಡುಜಾತಿಯ ಮರಗಳು, ನೀರಿಗಾಗಿ ಕೊಳವೆ ಬಾವಿಗಳು, ಕರೆಂಟ್ ಇತ್ಯಾದಿಗಳನ್ನು ಮಾಡಿಕೊಂಡಿದ್ದೇವೆ. 26 ಹಳ್ಳಿಗಳಿಗೆ ಸೇರಿರುವ ಈ ಜಮೀನಿನಲ್ಲಿ ಹರಿಜನ, ಬೋವಿ, ಸಿದ್ದರು, ಕೊರಚರು, ಲಂಬಾಣಿ, ಕುರುಬರು, ಲಿಂಗಾಯಿತ, ಜಂಗಾಲಿಗರು, ಈಡಿಗರು ವಾಸವಾಗಿದ್ದಾರೆ. ವಡ್ಡರಹಟ್ಟಿ, ಸಿದ್ದರಹಟ್ಟಿ, ಬಂದೂರು, ಕಾಳನಕೊಪ್ಪಲು, ಅಂಗ್ಲಾಪುರ, ಕೊರಚರಟ್ಟಿ, ಜಾವಗಲ್, ತಿಮ್ಮನಹಳ್ಳಿ, ನೇಲ್ಲಿಗೆ, ಮೊಸಳೆ, ಕೆರೆಕೋಡಿಹಳ್ಳಿ, ಹಂದ್ರಾಳು, ತಿರುಪತಿಹಳ್ಳಿ, ಮಾವತನಹಳ್ಳಿ, ಕೋಳಗುಂದ, ಗೊಲ್ಲರಹಟ್ಟಿ, ಹೊಸೂರು, ಬಂದೂರುಹಟ್ಟಿ, ನೀಲಗಿರಿಕಾವಲ್, ಕೆ.ಕೆಂಗನಳ್ಳಿ, ಬಕಪ್ಪನಕೊಪ್ಪಲು, ಹಿರೇಹಳ್ಳಿಗಳಿಗೆ ಸೇರಿರುತ್ತದೆ ಎಂದು ಮಾಹಿತಿ ನೀಡಿದರು.
ಈಗ ಜಮೀನು ಅರಣ್ಯ ಇಲಾಖೆಗೆ ಸೇರುತ್ತೆ. ಈ ಜಮೀನನ್ನು ಅಳತೆ ಮಾಡುತ್ತೇವೆ ಎಂದು ಅರಣ್ಯ ಇಲಾಖೆಯವರು ಬಂದು ನೋಟಿಸ್ ಕೊಟ್ಟು ರೈತರನ್ನು ಬೆದರಿಸಿ ಚಿಂತೆಗೆ ಈಡುಮಾಡಿದ್ದಾರೆ. ನಮಗೆ ಈ ಜಮೀನು ಬಿಟ್ಟರೆ ಬೇರೆ ಜಮೀನು ಇಲ್ಲ. ತಿನ್ನಲು ಅನ್ನವಿಲ್ಲ. ದನ-ಕರುಗಳ ಸಾಕಲು ಆಗಲ್ಲ ಹಾಗೂ ಮಳೆ, ಬೆಳೆ ಇಲ್ಲದೇ ಹೀಗೆ 10 ವರ್ಷದಿಂದ ರೈತರು ಪರಿತಪಿಸುತ್ತಿದ್ದಾರೆ. ಜೀವನ ಸಾಗಿಸಲು ಕಷ್ಟವಾಗಿದೆ. ಜಮೀನಿನಲ್ಲಿ ಮರ-ಗಿಡ ಬೆಳೆದಿದ್ದೇವೆ. ಮುಂದೆಯೂ ಬೆಳೆಯುತ್ತೇವೆ. ದಯ ಮಾಡಿ ತಾವು ಅರಣ್ಯ ಇಲಾಖೆಯಿಂದ ರೈತರಿಗೆ ಕಿರುಕುಳ ಬಾರದಂತೆ ಸಂಬಂಧಪಟ್ಟವರ ಗಮನಕ್ಕೆ ತಂದು ರೈತರ ಹಿತ ಕಾಪಾಡಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಮಾಡಿದರು.
ಹೊಳೆನರಸೀಪುರ ತಾಲೂಕಿನ ರಾಮಚಂದ್ರು ಮಾತನಾಡಿ, ಹೊಳೆನರಸೀಪುರ ತಾಲೂಕು ಕಸಬಾ ಹೋಬಳಿಯ ಶ್ರೀಮಠದ ಗ್ರಾಮದ ಸರ್ವೆ ನಂಬರ್ 1 ರಲ್ಲಿ ನೂರಾರು ರೈತರಿಗೆ ಪ್ರತಿಯೊಬ್ಬರಿಗೂ 3 ಎಕರೆಯಂತೆ 2007ರಲ್ಲಿ ಕಂದಾಯ ಇಲಾಖೆಯಿಂದ ಮಂಜೂರು ಮಾಡಿಕೊಡಲಾಗಿದೆ. ಎಲ್ಲಾ ರೈತರು ಭೂ ಸ್ವಾಧೀನ ಹೊಂದಿದ್ದು, ಇಲ್ಲಿಯವರೆಗೂ ಕಂದಾಯ ಕಟ್ಟಿಕೊಂಡು ಸಾಗುವಳಿ ಮಾಡಿ ಬರಲಾಗುತ್ತಿದೆ ಎಂದರು.
ಅರಣ್ಯ ಇಲಾಖೆಯವರು 2009-10 ರಲ್ಲಿ ಹಿರಿಯ ರೈತರ ಭೇಟಿ ಮಾಡಿ ಅರಣ್ಯ ಕೃಷಿ ಮಾಡಲು ನಿಮಗೆ ಸಸಿಗಳನ್ನು ನೀಡುತ್ತೇವೆ. ಅವುಗಳನ್ನು ಪೋಷಣೆ ಮಾಡಿ ನಂತರ ನೀವೆ ಕಟಾವು ಮಾಡಿಕೊಳ್ಳಿ ಎಂದು ಹೇಳಿದ್ದರು. ಈಗ ಮರಗಳು ಕಟಾವು ಮಾಡಲು ಮುಂದಾದರೆ ಅರಣ್ಯ ಇಲಾಖೆಯವರು ತಗಾದೆ ತೆಗೆದು ಈ ಮರಗಳು ನಮಗೆ ಸೇರಿದ್ದು, ಈ ಜಾಗವು ನಮಗೆ ಸೇರಿದೆ ಎಂದು ವಾದಿಸುತ್ತಿದ್ದಾರೆ. ಈ ಭೂಮಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ತುಂಬಾ ತೊಂದರೆ ಆಗಿದೆ. ಈ ತುಂಡು ಭೂಮಿಯನ್ನು ಬಿಟ್ಟರೇ ನಮಗೆ ಬೇರೆ ಭೂಮಿ ಇಲ್ಲ. ಈ ಭೂಮಿಯನ್ನು ರೈತರಿಗೆ ಬಿಡಿಸಿಕೊಡುವಂತೆ ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, ಜಿಲ್ಲಾ ಕಾರ್ಯದರ್ಶಿ ಜಯರಾಮ್, ಎಚ್.ಕೆ. ಸಿದ್ದಪ್ಪ, ಗೌರಿ, ಬೋರಯ್ಯ ಇತರರು ಉಪಸ್ಥಿತರಿದ್ದರು.