ಅರಣ್ಯ ಇಲಾಖೆಯಿಂದ ಜಮೀನಿಗೆ ಬೇಲಿ

03 SARAG 11
03 ಎಸ್ ಆರ್ ಜಿ.11 ಸರಗೂರು ತಾಲೂಕಿನ ಹಾದನೂರು ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಗ್ರಾಮಸ್ಥರು ಮಾತುಕತೆ ನಡೆಸಿದರು.
Published on

ಸರಗೂರು: ತಾಲೂಕಿನ ನುಗು ವನ್ಯಜೀವಿಧಾಮ ಅರಣ್ಯ ಇಲಾಖೆಯಿಂದ ರೈತರ ಸ್ವಾಧೀನದಲ್ಲಿರುವ ಜಮೀನುಗಳಿಗೆ ಬೇಲಿ ಅಳವಡಿಸಿ ಕಲ್ಲು ನೆಟ್ಟಿರುವುದರಿಂದ ರೈತರು ಜಮೀನಿಗೆ ಹೋಗಿ ಉಳುಮೆ ಮಾಡಲು ಸಾಧ್ಯವಾಗುತ್ತಿಲ್ಲ.

ಹಾದನೂರು, ಬಡಗಲಪುರ, ಹೆಡಿಯಾಲ, ಯಶವಂತಪುರ, ಎತ್ತಿಗೆ ಗ್ರಾಮದವರೆಗೆ ಸೇರಿದ ಜಮೀನು 150 ರಿಂದ 200 ಎಕರೆ ಜಮೀನಿನಲ್ಲಿ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳು ಮೇಲೆ ರೈಲು ಕಂಬಿಗಳಿಂದ ಬೇಲಿ ಅಳವಡಿಸಲು ಮುಂದಾಗಿದ್ದಾರೆ.

ಸರ್ವೇ ಮಾಡಿ ಜಮೀನುಗಳ ಬಳಿ ಹಾಗೂ ಗ್ರಾಮದ ಬಳಿ ಕಲ್ಲು ನೆಟ್ಟಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಒಕ್ಕಲೆಬ್ಬಿಸುತ್ತಾರೆ ಎಂಬ ಆತಂಕದಲ್ಲಿದ್ದೇವೆ. ನಮ್ಮ ತಾತ, ಮುತ್ತಾತನ ಕಾಲದಿಂದ ಈ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ನೂರಾರು ವರ್ಷಗಳಿಂದ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ನಮಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆಯವರು ಏನಾದರೂ ನಮ್ಮನ್ನು ಎತ್ತಂಗಡಿ ಮಾಡಲು ಪ್ರಯತ್ನಿಸಿದರೆ ಎಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ದನ-ಕರುಗಳಿಗೆ ಮೇಯಲು ಅವಕಾಶ ಮಾಡಿಕೊಡಬೇಕು. ಮೊದಲೇ ಟ್ರಂಚ್ ಮಾಡಲಾಗಿತ್ತು. ಆದರೆ, ಮತ್ತೆ ಹೆಚ್ಚುವರಿ ಜಮೀನುಗಳನ್ನು ಸೇರಿಸಿ ಕಲ್ಲು ನೆಟ್ಟಿರುವುದು ಎಷ್ಟು ಸರಿ? ಎಂದು ಗ್ರಾಮಸ್ಥರು ಲೌಡ್ ಸ್ಪೀಕರ್‌ನೊಂದಿಗೆ ತಮ್ಮ ಅಳಲು ಹಂಚಿಕೊಂಡಿದ್ದಾರೆ.

ಕಿರುಕುಳ ನೀಡುವುದನ್ನು ತಪ್ಪಿಸಿ
ಜಮೀನುಗಳಿಗೆ ಬೇಲಿ ಅಳವಡಿಸುವುದನ್ನೇ ನೆಪ ಮಾಡಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ಹೆಂಗಸರು, ಮಕ್ಕಳು ಎನ್ನುವುದನ್ನು ನೋಡದೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಗಮನಹರಿಸಿ ಕಿರುಕುಳ ನೀಡುವುದನ್ನು ತಪ್ಪಿಸಬೇಕು.
ರತ್ನಮ್ಮ ರಾಜೇಶ್, ಹಾದನೂರು ಗ್ರಾಪಂ ಸದಸ್ಯ

ಏಕಾಏಕಿ ಕಲ್ಲು ನೆಟ್ಟಿರುವುದು ಸರಿಯಲ್ಲ
ಅರಣ್ಯ ಇಲಾಖೆಯವರು ಜನರ ಗಮನಕ್ಕೆ ತರದೆ ಏಕಾಏಕಿ ಕಲ್ಲು ನೆಟ್ಟಿರುವುದು ಸರಿಯಲ್ಲ. ತೊಂದರೆ ಕೊಡುವುದಕ್ಕೆ ಹೋಗಬೇಡಿ. ಜಮೀನನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಸರ್ಕಾರದ ಆದೇಶ ಬರುವವರೆಗೂ ತೊಂದರೆ ಕೊಡಬೇಡಿ.
ಪುಟ್ಟಸ್ವಾಮಿ, ರೈತ ಮುಖಂಡ ಹಾದನೂರು

ಹೋರಾಡಿ ಭೂಮಿ ಉಳಿಸಿಕೊಂಡಿದ್ದೇವೆ
ರೈತರು ಸಾಗುವಳಿ ಮಾಡುತ್ತಿದ್ದಾರೆ. ಆದರೆ ಆರ್‌ಟಿಸಿಯಲ್ಲಿ ಅವರ ಹೆಸರು ಬಂದಿಲ್ಲ. ಹೋರಾಟವೇ ನಮ್ಮ ಬಲ. ಸಂವಿಧಾನದಡಿಯಲ್ಲಿ ಹೋರಾಟ ಮಾಡಿ ನಮ್ಮ ಭೂಮಿ ಉಳಿಸಿಕೊಳ್ಳಲಾಗುವುದು.
ಪ್ರಕಾಶ್, ಹಾದನೂರು ಗ್ರಾಪಂ ಸದಸ್ಯ

ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದೇವೆ
ನಮ್ಮ ತಾತ, ಮುತ್ತಾತನ ಕಾಲದಿಂದ ಈ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ನೂರಾರು ವರ್ಷಗಳಿಂದ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ನಮಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆಯವರು ಏನಾದರೂ ನಮ್ಮನ್ನು ಎತ್ತಂಗಡಿ ಮಾಡಲು ಬಂದರೆ ನಾವು ಅರಣ್ಯ ಇಲಾಖೆ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಡಬೇಗುತ್ತದೆ.
ಶಿವಮೂರ್ತಿ ಅಧ್ಯಕ್ಷ ಹಾದನೂರು ರೈತ ಸಂಘ

ಚುನಾವಣೆ ಬಹಿಷ್ಕರಿಸಲಾಗುವುದು
ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಏಕಾಏಕಿ ರೈತರ ಜಮೀನಿಗೆ ನುಗ್ಗಿ ಅವರು ಬೆಳೆಗಳನ್ನು ಕಿತ್ತು ಹಾಕಿ ತೊಂದರೆ ನೀಡಿದ್ದಾರೆ. ಇದೇ ರೀತಿ ಅರಣ್ಯ ಅಧಿಕಾರಿಗಳು ರೈತರಿಗೆ ತೊಂದರೆ ನೀಡಿದರೆ ವಿಧಾನಸಭಾ ಚುನಾವಣೆಗೆ ಬಹಿಷ್ಕಾರ ಹಾಕಲಾಗುವುದು.
ಉಮೇಶ್, ಗ್ರಾಮಸ್ಥ ಹಾದನೂರು

ಜೆಸಿಬಿ ಮೂಲಕ ಫಸಲು ನಾಶ
ಅರಣ್ಯ ಇಲಾಖೆ ಅಧಿಕಾರಿಗಳು ಕಾಡಂಚಿನ ಭಾಗದಲ್ಲಿ ಇರುವ ಜಮೀನು ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಜಮೀನಿನಲ್ಲಿ ಉಳುಮೆ ಮಾಡುವ ಸಮಯದಲ್ಲಿ ಜೆಸಿಬಿ ಯಂತ್ರ ಮೂಲಕ ಫಸಲನ್ನು ನಾಶ ಮಾಡಿದ್ದಾರೆ. ಅದನ್ನು ಪ್ರಶ್ನಿಸಲು ಹೋದರೆ ಕೇಸು ದಾಖಲು ಮಾಡಿದ್ದಾರೆ.
ಶಿವಲಿಂಗಯ್ಯ, ಗ್ರಾಪಂ ಸದಸ್ಯ ಯಶವಂತಪುರ

ಜಮೀನು ಕಳೆದುಕೊಳ್ಳುವ ಭೀತಿ
ಈ ಜಮೀನಲ್ಲಿ 150 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ. ಅದರೆ ಹಾದನೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜಾತಿಗೆ ಸೇರಿದವರು ಇದ್ದೇವೆ. ನುಗು ವಲಯ ಅರಣ್ಯಾಧಿಕಾರಿಗಳು ರೈತರ ಗಮನಕ್ಕೆ ತಾರದೆ ಏಕಾಏಕಿ ಅಕ್ರಮವಾಗಿ ಸರ್ವೇ ಮಾಡಿಸಿದ್ದಾರೆ. ಇದರಿಂದ ಜಮೀನು ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಗಂಗಾಧರ್, ಗ್ರಾಪಂ ಸದಸ್ಯ ಬಡಗಲಪುರ

ಒತ್ತುವರಿ ಮಾಡಿದ್ದರೆ ಬಿಡಬೇಕಾಗುತ್ತದೆ
ಅರಣ್ಯ ಇಲಾಖೆ ಜಾಗ ಸುಮಾರು 80-90 ಎಕರೆಯಷ್ಟು ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನೂ ಸರ್ವೇ ಮಾಡುತ್ತಿದ್ದು, ಸರಿಯಾದ ಮಾಹಿತಿ ಇನ್ನೂ ಬಂದಿಲ್ಲ. ಇನ್ನೂ ಹೆಚ್ಚಿನ ಜಾಗವನ್ನು ಒತ್ತುವರಿ ಮಾಡಿದ್ದರೆ ರೈತರು ಬಿಡಬೇಕಾಗುತ್ತದೆ. ನಾವು ರೈತರಿಗೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ.
ಪರಮೇಶ್, ಎಸಿಎಫ್ ಹೆಡಿಯಾಲ ವಲಯ

ಜಂಟಿ ಸರ್ವೇಗೆ ಸೂಚಿಸಲಾಗಿದೆ
ರೈತರು ಹಾಗೂ ಗ್ರಾಮಸ್ಥರು ಕಚೇರಿಗೆ ಬಂದು ಮನವಿ ಮಾಡಿದ್ದಾರೆ. ಮೊದಲು ಇರುವ ಭೂಮಿಯನ್ನು ಗುರುತು ಮಾಡಿಕೊಳ್ಳಬೇಕು. ರೈತರಿಗೆ ಯಾವುದೇ ತೊಂದರೆ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ನಮ್ಮ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಳುಹಿಸಿ ಜಂಟಿ ಸರ್ವೇ ಮಾಡಲು ಸೂಚನೆ ನೀಡಲಾಗಿದೆ.
ನಾಗಡ ದನ್ನಿ ಶಂಶಾಲಂ, ತಹಸೀಲ್ದಾರ್, ಸರಗೂರು

ರೈತರ ಪರ ಇರುತ್ತೇನೆ
ಅರಣ್ಯ ಇಲಾಖೆಯವರು ಜಮೀನಿನ ಹತ್ತಿರ ಕಲ್ಲು ನೆಡಲು ಬಂದರೆ ಯಾವುದೇ ಕಾರಣಕ್ಕೂ ರೈತರು ಅವಕಾಶ ಮಾಡಿಕೊಡಬೇಡಿ. ಸರ್ಕಾರ ರಚನೆ ಆದ ಬಳಿಕ ಸಮಸ್ಯೆ ಸರಿಪಡಿಸಲಾಗುವುದು. ನನ್ನ ತಂದೆ ಯಾವಾಗಲೂ ರೈತರ ಪರವಾಗಿ ಹೋರಾಟ ಮಾಡುತ್ತಿದ್ದರು. ನಾನೂ ನಿಮಗಾಗಿ ಕೆಲಸ ಮಾಡಿದ್ದೇನೆ.
ಅನಿಲ್ ಚಿಕ್ಕಮಾದು, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net