

ಸೋಮವಾರಪೇಟೆ: ರೈತರೊಬ್ಬರ ಕಾಫಿ ತೋಟವನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶ ಮಾಡಿದ್ದಾರೆ ಎಂದು ಆರೋಪಿಸಿ ಹರಗ ಗ್ರಾಮಸ್ಥರು ಸೋಮವಾರ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
1986ರಲ್ಲಿ ಕೆ.ಎಂ.ಲಿಂಗರಾಜು ಎಂಬವರು 36 ವರ್ಷದ ಹಿಂದೆ 3.89 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಏಲಕ್ಕಿ ಹಾಗೂ ಕಾಫಿ ತೋಟ ಮಾಡಿದ್ದರು. ಸರ್ಕಾರಕ್ಕೆ ಫಾರ್ಮ್ 53 ಸಲ್ಲಿಸಿ ಸಕ್ರಮಕ್ಕಾಗಿ ಕಾಯುತ್ತಿದ್ದರು. ಆದರೆ, ಅರಣ್ಯ ಇಲಾಖೆಯವರು ಏಕಾಎಕಿ ಅಕ್ರಮ ಪ್ರವೇಶ ಮಾಡಿ ಬೇಲಿಯನ್ನು ಕಿತ್ತು, ಕಾಫಿ ಗಿಡಗಳನ್ನು ನಾಶ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು 1800 ಹೆಕ್ಟೇರ್ ಜಾಗ ಅರಣ್ಯ ಪ್ರದೇಶ ಎಂದು ಹೇಳುತ್ತಾರೆ. ಇಡೀ ಹರಗ ಗ್ರಾಮದಲ್ಲಿ ಇರುವುದೇ 1800 ಹೆಕ್ಟೇರ್ ಜಾಗ. ಇಡೀ ಊರನ್ನೇ ನಾಶ ಮಾಡಿ ಅರಣ್ಯ ಬೆಳೆಸಿ ಎಂದು ಶಾಂತಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತ್ರಿಶೂಲ್ ಕಿಡಿಕಾರಿದರು.
ಸಿ ಮತ್ತು ಡಿ ಜಾಗದ ಸಮಸ್ಯೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅಕ್ರಮ-ಸಕ್ರಮಕ್ಕೆ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ಅರಣ್ಯ ಇಲಾಖೆಯವರು ತಾಳ್ಮೆಯಿಂದ ಇರಬೇಕು. ಈಗ ಕಿತ್ತಿರುವ ಬೇಲಿಯನ್ನು ಸರಿಪಡಿಸಿಕೊಡಬೇಕು. ಕಿತ್ತು ಎಸೆದ ಗಿಡಗಳಿಗೆ ಅರಣ್ಯ ಇಲಾಖೆ ನಷ್ಟ ಭರಿಸಬೇಕು ಎಂದು ಹರಗ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎ.ಧರ್ಮಪ್ಪ ಆಗ್ರಹಿಸಿದರು.
ಈಗಾಗಲೇ ಅಕ್ರಮ ಸಕ್ರಮಕ್ಕೆ ಫಾರ್ಮ್ ನಂ.53, ಮತ್ತು 57 ಕೊಟ್ಟು ಕಾಯುತ್ತಿದ್ದೇವೆ. ಶ್ರೀಮಂತರು ಹಾಗೂ ಪ್ರಭಾವಿ ರಾಜಕಾರಣಿಗಳಿಗೆ ಹಕ್ಕುಪತ್ರ ನೀಡಿದ್ದಾರೆ. ಆದರೆ, ಬಡವರಿಗಾಗಿ ತಂದ ಯೋಜನೆ ಬಡವರಿಗೆ ಉಪಯೋಗವಾಗುತ್ತಿಲ್ಲ. ಬಡ ರೈತರ ಫೈಲ್‌ಗಳು ತಾಲೂಕು ಕಚೇರಿಯಲ್ಲಿ ಧೂಳು ತಿನ್ನುತ್ತಿವೆ ಎಂದು ಕೃಷಿಕ ಡಾಲಿ ಪ್ರಕಾಶ್ ದೂರಿದರು.
ಸ್ಥಳಕ್ಕೆ ಆರ್‌ಎಫ್‌ಒ ಚೇತನ್ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಮೈಸೂರಿನಲ್ಲಿ ಇಲಾಖಾ ಮಟ್ಟದ ಸಭೆಗೆ ತೆರಳಿದ್ದಾರೆ ಎಂದು ಕಚೇರಿಯಲ್ಲಿದ್ದ ಡಿಆರ್‌ಎಫ್‌ಒ ಸತೀಶ್ ಹೇಳಿದರು. ಈ ವೇಳೆ ಸತೀಶ್ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಆರ್‌ಎಫ್‌ಒ ಕಚೇರಿಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಪ್ರಮುಖರಾದ ಶರತ್, ಆದಿತ್ಯ ಇದ್ದರು.