ಅರಣ್ಯ ಇಲಾಖೆ ಸ್ಥಳದಲ್ಲಿಯ ಒತ್ತುವರಿ ತೆರವು

9BK1
Published on

ಬಸವಕಲ್ಯಾಣ: ನಗರದ ಟೂರಿಸ್ಟ್ ಲಾಡ್ಜ್ ಸಮೀಪ ಅರಣ್ಯ ಇಲಾಖೆಯ ಬೆಲೆ ಬಾಳುವ ಅನಧಿಕೃತವಾಗಿ ಒತ್ತುವರಿ ಮಾಡಿದ್ದ ಸ್ಥಳವನ್ನು ಸೋಮವಾರ ಬೆಳಗ್ಗೆ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

ಬೆಳಗ್ಗೆ ನಗರಸಭೆ ಮತ್ತು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ಒತ್ತುವರಿ ಮಾಡಿಕೊಂಡಿದ್ದ ಸ್ಥಳದಲ್ಲಿಯ ಅಪೂರ್ಣವಾಗಿದ್ದ ಕಟ್ಟಡ ಮತ್ತು ಶೆಡ್ ತೆರವುಗೊಳಿಸಿದರು.

ನಗರದಲ್ಲಿನ ಅರಣ್ಯ ಸರ್ವೇ ೧೬೨/೩ರಲ್ಲಿ ಶೇಖ್ ಇಸ್ಮಾಯಿಲ್ ಶೇಖ್ ಅಹ್ಮದ್ ಹಾಗೂ ಮೆಹಬೂಬಸಾಬ್ ಮಜಹರ್ ಅಲಿ ಎನ್ನುವರು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿದಾರರು ಅಕ್ರಮವಾಗಿ ನಗರಸಭೆ ಪ್ಲಾಟ್‌ನಲ್ಲಿ ಅಪೂರ್ಣ ಕಟ್ಟಡ ಮತ್ತು ಶೆಡ್ ನಿರ್ಮಿಸಿದ್ದರು.

ಕಟ್ಟಡ, ಶೆಡ್ ನಿರ್ಮಿಸುವ ವೇಳೆ ಅರಣ್ಯ ಇಲಾಖೆಯವರು ತಡೆಯಲು ಮುಂದಾಗಿದ್ದರು. ಈ ವೇಳೆ ಒತ್ತುವರಿದಾರರು ಹೆಚ್ಚುವರಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರಣ್ಯ ಇಲಾಖೆಯನ್ನು ಪ್ರತಿವಾದಿಯನ್ನಾಗಿ ಮಾಡಿದ್ದರು. ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಕೆಲ ತಿಂಗಳ ಹಿಂದೆ ತೀರ್ಪು ನೀಡಿದೆ. ಒತ್ತುವರಿದಾರರ ದಾವೆ ರದ್ದುಪಡಿಸಿ, ಇಲಾಖೆ ಪರ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ತಿಂಗಳಲ್ಲಿ ಸ್ಥಳ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರೂ ತೆರವು ಮಾಡಿರಲಿಲ್ಲ. ಸೋಮವಾರ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಿ, `ಈ ಆಸ್ತಿಯು ಅರಣ್ಯ ಇಲಾಖೆಗೆ ಸೇರಿದ ಭೂಮಿ ಆಗಿರುತ್ತದೆ' ಎಂದು ಫಲಕ ಅಳವಡಿಸಲಾಯಿತು.

ವಲಯ ಅರಣ್ಯಾಧಿಕಾರಿ ಐಶ್ವರ್ಯ ಗೊಬ್ಬೂರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಂತೋಷಕುಮಾರ ಯಾಚೆ, ನಿಸಾರ ಮತ್ತು ಸಿಬ್ಬಂದಿ ನಗರಸಭೆ ಸಹಕಾರದೊಂದಿಗೆ ತೆರವು ಕಾರ್ಯ ನಡೆಸಿದರು. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಿಪಿಐ ಅಲಿಸಾಬ್, ಪಿಎಸ್‌ಐ ನಂದಕುಮಾರ ಮೂಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net