

ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಚೆಟ್ಟಳ್ಳಿ ಸಮೀಪದ ಅತ್ತೂರು-ನಲ್ಲೂರು ಗ್ರಾಮದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆಯ ಕಾರ್ಯಾಚರಣೆ ವೇಳೆ ಕಾಡಾನೆಯೊಂದು ಗುಂಡಿಗೆ ಬಿದ್ದು ಮೃತಪಟ್ಟಿದ್ದ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಉಪಟಳ ನೀಡುತ್ತಿರುವ ೪ ಕಾಡಾನೆಗಳನ್ನು ಸೆರೆಹಿಡಿಯಲು ಸರ್ಕಾರ ಆದೇಶ ನೀಡಿದ ಹಿನ್ನೆಲೆ ಇತ್ತೀಚೆಗೆ ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ಕಾಡಾನೆಯೊಂದನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿತ್ತು. ಇದಾದ ನಂತರ ಇದೀಗ ಮತ್ತೊಂದು ಕಾಡಾನೆ ಸೆರೆಹಿಡಿಯುವ ಸಂದರ್ಭ ಮೃತಪಟ್ಟಿದೆ.
ಘಟನೆ ವಿವರ: ಕುಶಾಲನಗರದ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅತ್ತೂರು-ನಲ್ಲೂರು, ಮೋದೂರು ಭಾಗದ ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಯನ್ನು ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವಾಗ ಅರವಳಿಗೆ ನೀಡಲಾಗಿತ್ತು. ಬಳಿಕ ಓಡಿದ ಕಾಡಾನೆಯು ಎತ್ತರ ಜಾಗದ ಮೇಲ್ಭಾಗದಿಂದ ಅಂದಾಜು ೩೦ ಅಡಿಯಷ್ಟು ಕೆಳಕ್ಕಿರುವ ಸೀಮೆಂಟ್ ಕಣಕ್ಕೆ ಬಿದ್ದು ಸಾವನ್ನಪ್ಪಿತ್ತು.
ಅರವಳಿಕೆ ನೀಡಿದ ಬಳಿಕ ಕಾಡಾನೆಯ ಚಲನವಲನದ ಬಗ್ಗೆ ಅರಣ್ಯ ಇಲಾಖೆ ಎಚ್ಚರವಹಿಸಬೇಕಿತ್ತು. ಘಟನೆ ಸಂಬಂಧ ತನಿಖೆ ನಡೆಯಬೇಕು. ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದೇ ಕಾಡಾನೆ ಸಾವಿಗೆ ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆ ಅಧಿಕಾರಿ ಮತ್ತು ಸಾರ್ವಜನಿಕರ ಅಭಿಪ್ರಾಯ ಲೌಡ್‌ಸ್ಪೀಕರ್‌ನಲ್ಲಿ ಅನಾವರಣಗೊಂಡಿದೆ.
ಅರಣ್ಯಾಧಿಕಾರಿಗಳು ಕಾಡಾನೆ ಕಾರ್ಯಾಚರಣೆ ವೇಳೆ ಎಚ್ಚರ ವಹಿಸಿದ್ದರೆ ಚೆಟ್ಟಳ್ಳಿ ಸಮೀಪದ ಅತ್ತೂರು-ನಲ್ಲೂರಿನಲ್ಲಿ ಸೆರೆ ಹಿಡಿದಿದ್ದ ಕಾಡಾನೆ ಬದುಕುಳಿಯುತ್ತಿತ್ತು. ಅರೆವಳಿಕೆ ಚುಚ್ಚುಮದ್ದು ನೀಡಿದ ತಕ್ಷಣ ಆನೆ ಸ್ವಲ್ಪ ದೂರ ಓಡಿ ಬೀಳುವುದು ಸಹಜ. ಆನೆ ಓಡುವಾಗ ಆ ಜಾಗದಲ್ಲಿ ಗುಂಡಿ ಇದೆಯಾ ಎಂದು, ಅರಣ್ಯ ಇಲಾಖೆ ಸಿಬ್ಬಂದಿಗಳು ಮುಂಜಾಗೃತೆ ವಹಿಸಿ ಕಾರ್ಯಚರಣೆ ಮಾಡಬೇಕಿತ್ತು. ಇದರ ಬಗ್ಗೆ ತನಿಖೆಯಾಗಬೇಕಾಗಿದೆ. ಕಾಡಾನೆ ಕಾರ್ಯಾಚರಣೆ ಮಾಡುವ ಸಂದರ್ಭ ಸಿಬ್ಬಂದಿಗಳು ಆನೆಗಳಿಗೆ ಹಿಂಸೆ ನೀಡಿ, ಕಾರ್ಯಚರಣೆ ಮಾಡುವುದನ್ನು ನಿಲ್ಲಿಸಬೇಕು.
ಓ.ಎಸ್.ಸುಹೈಲ್, ಸಂಘಟನಾ ಕಾರ್ಯದರ್ಶಿ, ಗಾಂಧಿ ಯುವಕ ಸಂಘ ಕಂಡಕರೆ
ಕಾರ್ಯಚರಣೆ ವೇಳೆ ಕಾಡಾನೆ ಸಾವು ದುಃಖಕರ ಮತ್ತು ನೋವಿನ ವಿಚಾರ. ಆದರೆ ಆನೆಗೆ ಅಂತರಿಕ ಗಾಯಗಳಾಗಿದ್ದ ಸಂದರ್ಭದಲ್ಲಿ ಇಲಾಖೆಯವರು ಮತ್ತು ವೈಧ್ಯರು ಆನೆಯ ಆರೋಗ್ಯವನ್ನು ಪರಿಶೀಲಿಸಿ ಕಾರ್ಯಾಚರಣೆಗೆ ಮುಂದಾಗಬೇಕಿತ್ತು. ತಜ್ಞರ ತಂಡದಿಂದ ಆನೆಯ ಸಾವಿಗೆ ಕಾರಣ ಏನೇಂದು ಪತ್ತೆಹಚ್ಚಬೇಕು.
ಕೆ.ಜಿ.ಶಿವನ್, ನಿವೃತ್ತ ಸೈನಿಕ ಮತ್ತು ಕಾಫಿ ಬೆಳೆಗಾರ, ತೊಂಡುರು ಗ್ರಾಮ ೭ನೇ ಹೊಸಕೋಟೆ
ಮಾನವೀಯ ದೃಷ್ಟಿಯಿಂದ ಕೆಲಸ ಮಾಡುತ್ತೇವೆ. ತುಂಬಾ ಎಚ್ಚರದಿಂದ ಕರ್ತವ್ಯ ನಿರ್ವಹಿಸುವಾಗ ಅನಿರೀಕ್ಷಿತವಾಗಿ ಇಂತಹ ದುರ್ಘಟನೆ ನಡೆಯುತ್ತದೆ. ಕಾಡಾನೆ ಸಾವಿನಿಂದ ನಮಗೂ ನಮ್ಮ ಸಿಬ್ಬಂದಿಗಳಿಗೂ ಬೇಸರವಿದೆ. ಈ ಘಟನೆಯ ಸತ್ಯಾತೆ ತಿಳಿಯಲು ಯಾವುದೇ ತನಿಖೆ ಮಾಡಿದರು ಎದುರಿಸಲು ಸಿದ್ಧರಿದ್ದೇವೆ. ಬೇಲಿಯೊಂದಕ್ಕೆ ಸಿಲುಕಿದ ಆನೆಯನ್ನು ರಕ್ಷಿಸಿದಾಗ ಹೋಗಳದ ಜನ ಅನಾಹುತ ಸಂಭವಿಸಿದಾಗ ನಿಂದಿಸಲು ಬರುತ್ತಾರೆ. ಇರಲಿ ಯಾರು ಏನೇ ಹೇಳಿದರೂ ನಮ್ಮ ಕರ್ತವ್ಯವನ್ನು ನಿಷ್ಠೆ, ಪ್ರಾಮಾಣಿಕವಾಗಿ ಮಾಡುತ್ತೇವೆ.
ಶಿವರಾಮ್, ಆರ್.ಎಫ್.ಓ, ಕುಶಾಲನಗರ
ಅರಣ್ಯ ಇಲಾಖೆಯ ವಿರುದ್ಧ ಪದೇಪದೇ ಆರೋಪಗಳು ಕೇಳಿಬರುತ್ತಿದೆ. ಆನೆ ಕಂದಕ, ಸೋಲಾರ್ ಬೇಲಿ, ರೋಪ್ ಬ್ಯಾರಿಯರ್, ರೈಲ್ವೆ ಹಳಿಗಳ ಬ್ಯಾರಿಕೇಡ್ ಮೂಲಕ ಕಾಡಾನೆಗಳು ನಾಡಿಗೆ ಬಾರದಂತೆ ಶಾಶ್ವತ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇದೀಗ ಇಲಾಖೆ ಕಾಡಾನೆಯ ಸಾವಿಗೆ ಕಾರಣವಾಗಿರುವುದು ದುರಾದೃಷ್ಠಕರ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಿರಲಿ.
ಖುಷಿ, ಮಡಿಕೇರಿ, ಉದ್ಯೋಗಿ
ಸರ್ಕಾರಿ ಅಧಿಕಾರಿಗಳಿಗೆ ನಿಯಮವಿರುತ್ತದೆ. ಅದನ್ನು ಮೀರಿ ಕೆಲಸ ಮಾಡಬೇಕೆನ್ನುವ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪು. ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗದ ರೀತಿಯಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ನೈತಿಕ ಬೆಂಬಲ ನೀಡಬೇಕು.
ಎಂ.ಆತ್ಮಾನಂದ, ಕರಿಯಪ್ಪ ಬಡಾವಣೆ ನಿವಾಸಿ, ಕುಶಾಲನಗರ
ಕಾಡಾನೆ ಸೆರೆ ಹಿಡಿಯುವ ಸಂದರ್ಭ ಮೃತಪಟ್ಟಿರುವುದು ದುರಂತ. ಕಾರ್ಯಾಚರಣೆ ವೇಳೆ ಎಚ್ಚರ ವಹಿಸಬೇಕು. ಅರವಳಿಕೆ ನೀಡುವಾಗ ಆನೆಯ ಆರೋಗ್ಯ ಕುರಿತು ಗಮನ ಹರಿಸಬೇಕಿತ್ತು. ಇಲ್ಲದಿದ್ದಲ್ಲಿ ಇಂತಹ ಅನಾಹುತಗಳು ಸಂಭವಿಸುತ್ತದೆ.
ಎಂ.ಬಿ.ಚಿಣ್ಣಪ್ಪ, ಸಾವಯವ ಕೃಷಿಕ, ಹಂಡ್ಲಿ
ನಿರಂತರವಾಗಿ ರೈತರ ಬೆಳೆಗಳ ಮೇಲೆ ದಾಳಿ ಮಾಡುವ ಕಾಡಾನೆಗಳನ್ನು ಸೆರೆ ಹಿಡಿಯುವ ಕ್ರಮ ಶ್ಲಾಘನೀಯ. ಆದರೆ, ಕಾಡಾನೆ ಸೆರೆಗೆ ಅಗತ್ಯವಿರುವ ಸಲಕರಣೆಗಳು ಹಾಗೂ ನುರಿತ ತಜ್ಞರು ಇರಬೇಕು. ಕಾಡಾನೆಗಳ ಸಂತತಿ ಕಡಿಮೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಅರಣ್ಯ ಇಲಾಖೆಯದ್ದು.
ಅಬ್ದುಲ್ ನಝೀರ್, ದೈಹಿಕ ಶಿಕ್ಷಣ ಶಿಕ್ಷಕರು, ಹಂಡ್ಲಿ ಪ್ರೌಢ ಶಾಲೆ
ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ರಕ್ಷಣೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಸಾವು ಸಂಭವಿಸಿದಾಗ ಎಲ್ಲರಿಗೂ ಬೇಸರವಾಗುತ್ತದೆ. ಜೀವ ಸಂಕುಲ ಸಂರಕ್ಷಣೆ ಬಗ್ಗೆ ಮತ್ತಷ್ಟು ಕಾಳಜಿ ಬೇಕಿದೆ. ಮತ್ತೆ ತಪ್ಪಾಗದಂತೆ ಎಚ್ಚರ ಅವಶ್ಯ. ಎಲ್ಲೋ ಬದುಕುತ್ತಿವೆ ಎಂದು ಕುಶಿಯಲ್ಲಿ ನಾವಿರುತ್ತೇವೆ.
ಪುತ್ತಾಮನೆ ವಿದ್ಯಾ ಜಗದೀಶ್, ಉದ್ಯೋಗಿ, ಕಿರುಗೂರು ಗ್ರಾಮ
ಕಾಡಾನೆ ಕಾರ್ಯಚರಣೆ ವೇಳೆ ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ಅರಣ್ಯ ಇಲಾಖೆ ತೆಗೆದುಕೊಳ್ಳಬೇಕು. ಕೊಡಗಿನಲ್ಲಿ ಕಾಡಾನೆ ಮಾನವ ಸಂಘರ್ಷ ಇದ್ದೆ ಇದೆ. ಎರಡು ಜೀವಗಳಿಗೂ ಅಪಾಯವಾಗಬಾರದು. ತರಾತುರಿಯ ಕಾರ್ಯಚರಣೆಯಿಂದ ಅನಾಹುತ ಸಂಭವಿಸಬಹುದು. ಇನ್ನಾದರೂ ಎಚ್ಚರ ವಹಿಸಿ.
-ದರ್ಶನ್, ಸೋಮವಾರಪೇಟೆ, ಕಾಫಿ ಬೆಳೆಗಾರ