

ಗುಂಡ್ಲುಪೇಟೆ: ಬಂಡೀಪುರದ ಬಫರ್ ವಲಯದ ಅಂಚಿನ ಜಮೀನುಗಳಲ್ಲಿ ಪದೇಪದೆ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲವು ತಿಂಗಳಿಂದ ಹುಲಿ ಜಮೀನುಗಳಲ್ಲಿ ಮೇಯುತ್ತಿರುವ ಸಾಕುಪ್ರಾಣಿಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿರುವುದು ಹತ್ತಾರು ಗ್ರಾಮಗಳ ರೈತರ ಆತಂಕಕ್ಕೆ ಕಾರಣವಾಗಿದೆ. ಸೆಕ್ಷನ್ 4ಕ್ಕೆೆ ಸೇರಿದ ಸುಮಾರು 1,355 ಹೆಕ್ಟೇರ್ ಪ್ರದೇಶ ವಿಸ್ತೀರ್ಣವಿರುವ ತೆರಕಣಾಂಬಿ ಗುಡ್ಡದಲ್ಲಿ ದಟ್ಟವಾದ ಮರಗಿಡಗಳಿಲ್ಲದಿದ್ದರೂ ನೀಲಗಿರಿ, ಅಕೇಶಿಯಾ, ಸಿಲ್ವರ್ ಓಕ್ ಮರಗಳಿಂದ ಕೂಡಿದ ಕುರುಚಲು ಕಾಡಾಗಿದೆ. ಗುಡ್ಡದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಗೋಮಾಳದ ಕೊರತೆಯಿಂದ ಜಾನುವಾರುಗಳ ಮೇವಿಗಾಗಿ ಗುಡ್ಡದ ಹುಲ್ಲನ್ನೇ ಅವಲಂಬಿಸಿದ್ದಾರೆ. ಕಾಡುಹಂದಿಗಳಿಗಿಂತ ಕಾಡಂಚಿನ ಜಮೀನುಗಳಲ್ಲಿ ಸಿಗುವ ಜಾನುವಾರುಗಳನ್ನು ಬೇಟೆ ಆಡುವುದೇ ಸುಲಭವಾಗಿದ್ದರಿಂದ ಈ ಹುಲಿ ಮೇಲಿಂದ ಮೇಲೆ ದಾಳಿ ನಡೆಸುತ್ತಿದೆ.
2018ರಲ್ಲಿ ಬಂಡೀಪುರಕ್ಕೆ ಬಿದ್ದ ಬೆಂಕಿಯಿಂದ ನೆರೆಯ ಕುಂದಕೆರೆ ವಲಯದಿಂದ ಹೊರಬಂದಿದ್ದ ಎರಡು ಎಳೆಯ ಹುಲಿಗಳಲ್ಲಿ ಒಂದು ಪಾರ್ವತಿ ಬೆಟ್ಟದ ಮಗ್ಗುಲಿನಲ್ಲಿ ಬೇಟೆಯಾಡಿದ್ದ ಜಾನುವಾರುವಿನ ಕಳೇಬರದ ಮೇಲೆ ದುಷ್ಕರ್ಮಿಗಳು ಹಾಕಿದ್ದ ವಿಷದಿಂದ ಸಾವಿಗೀಡಾಗಿತ್ತು. ಮತ್ತೊಂದು ಹುಲಿ ಪ್ರಬದ್ಧವಾಗಿದ್ದು ಬಂಡೀಪುರದಿಂದ ಬಫರ್ ವಲಯದವರೆಗೂ ಸುತ್ತಾಡುತ್ತಿದೆ. ಗೋಪಾಲಸ್ವಾಮಿಬೆಟ್ಟ ವಲಯದ ಹುಂಡೀಪುರದಿಂದ ಶಿವಪುರ, ಬಫರ್ ವಲಯದ ವಡೆಯನಪುರ, ಅಣ್ಣೂರುಕೇರಿ ಪಾರ್ವತಿಬೆಟ್ಟ, ಕಗ್ಗಳದಹುಂಡಿ, ತ್ರಿಯಂಭಕಪುರ, ದೇಪಾಪುರ ಸಮೀಪದ ಜಮೀನುಗಳಲ್ಲಿ ಜಾನುವಾರುಗಳನ್ನು ಗುರಿಯಾಗಿಸಿ ಬೇಟೆಯಾಡುತ್ತಿದೆ. ಅದೂ ಒಮ್ಮೆ ದಾಳಿ ನಡೆಸಿದರೆ ಏಕಕಾಲದಲ್ಲಿ ಮೂರು ನಾಲ್ಕು ರಾಸುಗಳನ್ನು ಕೊಲ್ಲುತ್ತಿದೆ.
ಕಳೆದ ವರ್ಷಗಳಲ್ಲಿ ವಡೆಯನಪುರ ಸಮೀಪ ರೇಚಣ್ಣ ಎಂಬುವರ ಜಮೀನಿನ ಕೊಟ್ಟಿಗೆಯಲ್ಲಿದ್ದ ನಾಲ್ಕು ಹಸುಗಳು, ಕಗ್ಗಳದಹುಂಡಿ ಸಮೀಪ ಸಯ್ಯದ್ ಎಂಬುವರ ಜಮೀನಿನಲ್ಲಿದ್ದ ಮೂರು ಹಸುಗಳು, ಹುಂಡೀಪುರ, ಶಿವಪುರ, ದೇಪಾಪುರ ಗ್ರಾಮಗಳಲ್ಲಿ ಮೇಲಿಂದ ಮೇಲೆ ದಾಳಿ ನಡೆಸಿ ಜಾನುವಾರುಗಳನ್ನು ಬಲಿ ಪಡೆಯುತ್ತಿದೆ. ನ.20ರ ಭಾನುವಾರ ಕಂದೇಗಾಲ ಗ್ರಾಮದ ಮಂಜಪ್ಪ ಎಂಬುವರ ಮೂರು ಹಸುಗಳನ್ನು ಕೊಂದು ಹಾಕಿದೆ.
ಸತ್ತ ಜಾನುವಾರುಗಳ ಮಾಂಸವನ್ನು ಬೋನಿನೊಳಗೆ ಇಟ್ಟು ಸುಲಭವಾಗಿ ಸೆರೆ ಹಿಡಿಯಲು ಸಾಧ್ಯವಿದ್ದರೂ ಅರಣ್ಯ ಇಲಾಖೆ ಇದನ್ನು ಮಾಡುತ್ತಿಲ್ಲ. ಬದಲಾಗಿ ಅಲ್ಲಲ್ಲಿ ಕೇವಲ ಬೋನು ಇರಿಸಿ ಕೂಂಬಿಂಗ್ ನಡೆಸುತ್ತಿದ್ದಾರೆ. ಅಲ್ಲಲ್ಲಿ ಕ್ಯಾಮರಾಗಳನ್ನು ಅಳವಡಿಸಿರುವುದು ಬಿಟ್ಟರೆ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ರೈತರು ತಮ್ಮ ಜಾನುವಾರುಗಳೊಂದಿಗೆ ಜಮೀನುಗಳತ್ತ ಹೋಗಲಾಗದಂತಾಗಿದೆ. ಕೂಡಲೇ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು. ಅಕಸ್ಮಾತ್ ಮನುಷ್ಯರ ಮೇಲೆ ದಾಳಿ ನಡೆಸಿ ಅನಾಹುತ ಸಂಭವಿಸಿದರೆ ಅರಣ್ಯಾಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ದೇಪಾಪುರ ಗ್ರಾಮಸ್ಥರು ಎಚ್ಚರಿಸಿದ್ದಾರೆ.