ಅರಣ್ಯ ಇಲಾಖೆ ವಿರುದ್ಧ ಅಸಮಾಧನ

26 gkl 01
ಗೋಣಿಕೊಪ್ಪಲು ಸಮೀಪದ ಮಾಯಮುಡಿ ಮಾನಿಲ್ ಅಯ್ಯಪ್ಪ ಕಟ್ಟಡದಲ್ಲಿ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡಿರ ಪೂವಯ್ಯ, ಮಾಜಿ ಸದಸ್ಯರಾದ ಸಣ್ಣುವಂಡ ವಿಶ್ವನಾಥ್ ಇತರರಿದ್ದರು.
Published on

ಮಡಿಕೇರಿ: ಮಾಯಮುಡಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಎಷ್ಟೇ ಮನವಿ ಮಾಡಿದರೂ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ರೈತರು ಸಭೆ ಸೇರಿ ಅಧಿಕಾರಿಗಳ ಗಮನ ಸೆಳೆಯುವ ಕುರಿತು ಚರ್ಚಿಸಿದರು.

ಗೋಣಿಕೊಪ್ಪಲಿನ ಮಾಯಮುಡಿ ಮಾನಿಲ್ ಅಯ್ಯಪ್ಪ ಕಟ್ಟಡದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾನಿಲ್ ಐಯ್ಯಪ್ಪ ಸೇವಾ ಸಮಿತಿ ಗೌರವ ಅಧ್ಯಕ್ಷ ರಮೇಶ್ ಮಾಯಮುಡಿ ಪ್ರಸ್ತಾವಿಕವಾಗಿ ಮಾತನಾಡಿದರು.

ಅರಣ್ಯ ಇಲಾಖೆಯವರು ಆನೆ ಓಡಿಸುವ ಕಾರ್ಯವನ್ನು ಜವಾಬ್ದಾರಿಯಿಂದ ಮಾಡುತ್ತಿಲ್ಲ ಎಂದು ಸಭೆಯಲ್ಲಿದ್ದ ಬಹುತೇಕರು ಅಸಮಾಧಾನ ತೋಡಿಕೊಂಡರು.
ನೋಕ್ಯ ಗ್ರಾಮದ ಹತ್ತಿರ ಬ್ಯಾರಿಕೇಡ್ ಹಾಕಲು ಉಳಿದಿರುವ ಕೆಲಸವನ್ನು ಕೂಡಲೇ ಪೂರ್ಣಗೊಳಿಸಿ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆನೆಗಳನ್ನು ಓಡಿಸಿ ಅಲ್ಲಿ ಒಂದು ಗೇಟ್ ಅಳವಡಿಸಿ ಅವುಗಳು ಮತ್ತೆ ವಾಪಸ್ ಬಾರದಂತೆ ನೋಡಿಕೊಳ್ಳಬೇಕು. ಈಗಾಗಲೇ ಆನೆಗಳ ಹಾವಳಿಯಿಂದ ತೋಟಗಳು ಹಾಳಾಗಿದ್ದು, ರೈತರಿಗೆ ನಷ್ಟವಾಗಿದೆ. ಜತೆಗೆ, ತೋಟಗಳಲ್ಲಿ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುವುದರಿಂದ ಅವರ ಜೀವನಕ್ಕೆ ಮತ್ತು ಜೀವಕ್ಕೆ ತೊಂದರೆ ಆಗಿದೆ. ರೈತರು ಆನೆಗಳ ಹಾವಳಿಯಿಂದ ಗದ್ದೆಗಳಲ್ಲಿ ಕೃಷಿ ಮಾಡದೇ ಬಿಟ್ಟಿರುವುದರಿಂದ ಊಟಕ್ಕೆ ಅಕ್ಕಿಯ ಕೊರತೆ, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ ಎಂದು ರೈತ ಮುಖಂಡರು ಅಲವತ್ತುಕೊಂಡರು.

ಗದ್ದೆ ಮಾಡದೇ ಇರುವುದರಿಂದ ಅಂತರ್ಜಲ ಕುಸಿಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಲಿದೆ. ತೋಟದ ಮಾಲೀಕರಿಗೆ ಹೆಚ್ಚು ನಷ್ಟ ಆಗುತ್ತಿದೆ. ಆದರೆ, ಪರಿಹಾರ ರೂಪದಲ್ಲಿ ಸಿಗುಣ ಹಣ ಕಡಿಮೆಯಿದೆ. ಅದನ್ನು ಪರಿಷ್ಕರಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಈ ಸಂಬಂಧ ಮಾನ್ಯ ಅರಣ್ಯ ಸಚಿವರಿಗೆ ಮನವಿ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ, ಕೊಡಗಿನ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕಳಿಸುವಂತೆಯೂ ನಿರ್ಧರಿಸಲಾಯಿತು.

ಸಭೆಯಲ್ಲಿ ಗ್ರಾಪಂ ಸದಸ್ಯ ಚೆಪ್ಪುಡಿರ ಪೂವಯ್ಯ, ಮಾಜಿ ಸದಸ್ಯರಾದ ಸಣ್ಣುವಂಡ ವಿಶ್ವನಾಥ್, ಅಪಟ್ಟಿರ ಪ್ರದೀಪ್, ಸಂನ್ನುವಂಡ ವಿನಯ್ ಅಯ್ಯಪ್ಪ, ಕೊಣಿಯಂಡ ಸಂಜು, ಚೇತನ್, ಮಾನಿಪಂಡ ಸುರೇಶ, ಸಣ್ಣುವಂಡ ಸಂಪತ್, ತೀತೀರಮಾಡ ಜಗದೀಶ್, ಬಲ್ಲ್ಯಂಡ ರವಿ, ಅಪಟ್ಟಿರ ಚೆಂಗಪ್ಪ ಸಣ್ಣುವಂಡ ಸೂರಜ್ ಮತ್ತಿತರರು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net