ಅರಣ್ಯ ಇಲಾಖೆ ಜಾಗದಲ್ಲಿದ್ದ ಪೆಟ್ಟಿಗೆ ಅಂಗಡಿ ತೆರವು

02 HANUR 3
Published on

ಹನೂರು: ತಾಲೂಕಿನ ನಾಲ್‌ರೋಡ್ ವೃತ್ತದ ಬಳಿ ಅರಣ್ಯ ಇಲಾಖೆಯ ಜಾಗವನ್ನು ಅತಿಕ್ರಮಿಸಿ ಇಟ್ಟುಕೊಂಡಿದ್ದ ಮೂರು ಪೆಟ್ಟಿಗೆ ಅಂಗಡಿಗಳನ್ನು ಭಾನುವಾರ ತಡರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿ ತೆರೆವುಗೊಳಿಸಿದರು.

ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ಅರಣ್ಯ ವಲಯಕ್ಕೆ ಸೇರಿದ ಈ ಜಾಗದಲ್ಲಿ ಮೂವರು ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಇಲಾಖೆಯ ಜಾಗವನ್ನು ಅತಿಕ್ರಮಿಸಿದ್ದರಿಂದ ಸಂಬಂಧಪಟ್ಟವರಿಗೆ ಪೆಟ್ಟಿಗೆ ಅಂಗಡಿಗಳನ್ನು ತೆರೆವುಗೊಳಿಸುವಂತೆ 3 ಬಾರಿ ನೋಟಿಸ್ ನೀಡಲಾಗಿತ್ತು. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಕೆಲ ಗ್ರಾಮಸ್ಥರು ಕಳೆದ 2 ತಿಂಗಳ ಹಿಂದೆ ರೈತ ಸಂಘಟನೆಯ ಜತೆಗೂಡಿ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೆಟ್ಟಿಗೆ ಅಂಗಡಿ ಇರಿಸಿಕೊಂಡಿರುವ ಸ್ಥಳದ ಬಗ್ಗೆ ಅಗತ್ಯ ದಾಖಲೆಗಳಿದ್ದರೆ ನೀಡಿ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಈವರೆಗೂ ನೀಡದ ಕಾರಣ ತಡರಾತ್ರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಪೆಟ್ಟಿಗೆ ಅಂಗಡಿಗಳನ್ನು ತೆರೆವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net