

ಸಕಲೇಶಪುರ : ಮನೆಯನ್ನು ಕಟ್ಟುವಂತಿಲ್ಲ, ಮಳೆಗಾಲದಲ್ಲಿ ಮನೆ ಬೀಳುವ ಹಂತದಲ್ಲಿದ್ದರೂ ರಿಪೇರಿ ಮಾಡುವಂತಿಲ್ಲ, ರಸ್ತೆ ನಿರ್ಮಿಸುವಂತಿಲ್ಲ, ವಿದ್ಯುತ್ ಕಂಬ ಹಾಕುವಂತಿಲ್ಲ, ತೋಟಗಳಲ್ಲಿ ಕೆಲಸ ಮಾಡುವಂತಿಲ್ಲ… ಅರಣ್ಯ ಇಲಾಖೆ ಚಿತ್ರಹಿಂಸೆಯಿಂದ ಬದುಕೇ ಬೇಡದಂತಾಗಿದೆ ಸಾರ್..!
ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಕೇಳಿ ಬಂದ ಸಹಾಯಕತೆಯ ಮಾತುಗಳು.
ಸಭೆಯ ಆರಂಭದಲ್ಲಿ ಮಾತನಾಡಿದ ಕಾಫಿ ಬೆಳೆಗಾರ ಮಾಸ್ತಾರೆ ಲೋಕೇಶ್, ಹಾನುಬಾಳು ಹೋಬಳಿಯ 8 ಗ್ರಾಮಗಳ 2 ಸಾವಿರ ಜನರನ್ನು ಸೆಕ್ಷನ್ 4ರ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ನಿಯಮಗಳನ್ನು ಉಲ್ಲಂಘಿಸಿದ 400 ಜನರ ಮೇಲೆ ದೂರು ದಾಖಲಿಸುವ ಮೂಲಕ ಹೋಬಳಿಯ ಜನರಿಗೆ ಕಿರುಕುಳ ನೀಡಲಾಗುತ್ತಿದೆ. 1920 ರಲ್ಲಿ ಸೆಕ್ಷನ್ 4 ಎಂದು ಘೋಷಣೆಯಾಗಿದ್ದನ್ನು 1923 ರಲ್ಲಿ ಕೈಬಿಡಲಾಗಿದೆ. ಈ ದಾಖಲೆಯನ್ನು ಅರಣ್ಯ ಇಲಾಖೆಗೆ ನೀಡಿದ್ದೇವೆ. ಆದರೂ ಕಿರುಕುಳ ತಪ್ಪುತ್ತಿಲ್ಲ. ಈಗಾಗಲೇ 800 ಜನರ ಪಹಣಿಯನ್ನು ಕೈಬಿಡುವಂತೆ ಉಪವಿಭಾಗಾಧಿಕಾರಿ ಕಚೇರಿಗೆ ಅರಣ್ಯ ಇಲಾಖೆ ಮನವಿ ಮಾಡಿದೆ. ಅರಣ್ಯ ಇಲಾಖೆಗೆ ಉಪವಿಭಾಗಾಧಿಕಾರಿ ಕಚೇರಿ ಅಸ್ತು ಎಂದರೆ ಹೋಬಳಿಯ ನೂರಾರು ಜನರು ಬೀದಿಗೆ ಬೀಳುವುದು ನಿಶ್ಚಿತ. ದಯವಿಟ್ಟು ಸಮಸ್ಯೆ ಪರಿಹರಿಸಿ ಎಂದು ಅಲವತ್ತುಕೊಂಡರು.
ವಲಯ ಅರಣ್ಯಾಧಿಕಾರಿ ಶಿಲ್ಪಾ ಮಾತನಾಡಿ, ಹೋಬಳಿಯಲ್ಲಿ 1923 ರಲ್ಲಿ ಸೆಕ್ಷನ್ 4 ಕೈಬಿಟ್ಟಿರುವುದಕ್ಕೆ ದಾಖಲೆ ಇಲ್ಲ. ಹೋಬಳಿಯಲ್ಲಿ ನಡೆಯುತ್ತಿರುವ ಬಹುತೇಕ ಹೋಂ ಸ್ಟೇ, ರೆಸಾರ್ಟ್ ನಿರ್ಮಾಣಗೊಂಡಿರುವ ಜಮೀನು ಮಂಜೂರು ಸಂಪೂರ್ಣ ನಕಲಿಯಾಗಿರುವ ಕಾರಣ ದೂರು ದಾಖಲಿಸಲಾಗಿದೆ. ಈ ಸಂಬಂಧ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದರು, ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಗ್ರಾ.ಪಂ. ಅಧಿಕಾರಿಗಳು ಹೋಂಸ್ಟೇ ಹಾಗೂ ರೆಸಾರ್ಟ್ ನಡೆಸಲು ಅನುಮತಿ ನೀಡಿದ್ದರೂ ನೀವು ಕೇವಲ ರೆಸಾರ್ಟ್ ಮಾಲೀಕರ ಮೇಲೆ ಹೇಗೆ ದೂರು ದಾಖಲಿಸುತ್ತಿರಾ? ಜಿಲ್ಲಾಧಿಕಾರಿಗಳನ್ನು ದೂರಿನಲ್ಲಿ ಸೇರ್ಪಡೆಗೊಳಿಸಬೇಕಲ್ಲವೇ ಎಂದು ಪ್ರಶ್ನಿಸಿದರು.
ಸೆಕ್ಷನ್ 4 ರಲ್ಲಿ ಮಂಜೂರಾತಿ ನೀಡಿದ್ದಕ್ಕೆ ಗ್ರಾಮಲೆಕ್ಕಿಗರು, ಕಂದಾಯ ನೀರಿಕ್ಷಕರು ಹಾಗೂ ತಹಸೀಲ್ದಾರ್ ಮೇಲೆ ದೂರು ದಾಖಲಿಸಿ, ಈ ಜಮೀನಿನಲ್ಲಿ ಹಿಂದೆ ಮರ ಕಡಿಯಲು ಅವಕಾಶ ನೀಡಿರುವ ವಲಯ ಅರಣ್ಯಾಧಿಕಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೇಲೆ ದೂರು ದಾಖಲಿಸಿ. ಏನು ಅರಿಯದ ಬೆಳೆಗಾರರ ಮೇಲೆ ಏಕೆ ದೂರು ದಾಖಲಿಸುತ್ತಿರಾ ಎಂದು ಹರಿಹಾಯ್ದರು.
ನ್ಯಾಯಾಲಯ ನಿರ್ದೇಶನ: ಸೆಕ್ಷನ್ 4 ರ ಜಮೀನಿನಲ್ಲಿ ಸಿಮೆಂಟ್ ರಸ್ತೆ, ಸೇತುವೆಗಳ ನಿರ್ಮಾಣ ಮಾಡದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇರುವ ಜಾಗವನ್ನು ಅನುಭವಿಸಿ ಹೊಸದಾಗಿ ಒತ್ತುವರಿ ಮಾಡಬೇಡಿ ಎಂದು ಬೆಳೆಗಾರರಿಗೆ ಸಲಹೆ ನೀಡಿದ ಸಂಸದರು, ಇರುವ ಕಟ್ಟಡಗಳಿಗೆ ಯಾವುದೇ ತೊಂದರೆ ಕೊಡಬಾರದು. ಹೊಸದಾಗಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅವಕಾಶ ನೀಡಬೇಡಿ ಎಂದು ವಲಯ ಅರಣ್ಯಾಧಿಕಾರಿಗೆ ಸೂಚನೆ ನೀಡಿದರು.
2013 ರಲ್ಲಿ ಡೀಮ್ಡ್ ಅರಣ್ಯ ಕಾಯೆ ್ದಜಾರಿಗೊಂಡಿದೆ. ಆದರೆ, ತಾಲೂಕಿನಲ್ಲಿ 2014 ರಲ್ಲಿ ಅರಣ್ಯ ಇಲಾಖೆಯಲ್ಲಿದ್ದ ಜಮೀನನ್ನು ರೈತರಿಗೆ ಮಂಜೂರು ಮಾಡಿಕೊಟ್ಟಿದ್ದೀರಾ. ಈ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೇ ಹೊರತು ಜಮೀನು ಮಂಜೂರು ರದ್ದತಿಗೆ ಶಿಫಾರಸು ಮಾಡಬೇಡಿ ಎಂದು ಶಿರಸ್ತೇದಾರ್ ಉಮೇಶ್‌ಗೆ ಸೂಚಿಸಿದರು.
ಸರ್ವೇ ಕಚೇರಿಯಲ್ಲಿ 250 ಕ್ಕೂ ಅಧಿಕ ತಿದ್ದುಪಡಿ ಕಡತಗಳು ವರ್ಷಗಳಿಂದ ಕೊಳೆಯುತ್ತಿದ್ದು ಜನರು ತಮ್ಮ ಕೆಲಸಕ್ಕಾಗಿ ನಿಮ್ಮ ಕಚೇರಿ ಓಡಾಡಿ ಚಪ್ಪಲಿ ಸವೆದುಹೋಗಿವೆ. ನಿಮ್ಮ ಕಚೇರಿಗೆ ಅಲೆಯುವ ದುಡ್ಡಿನಲ್ಲಿ ಬೇರೆ ಜಾಗಗಳನ್ನೆ ಖರೀದಿಸಬಹುದು ಎಂದು ಭೂ ದಾಖಲೆಗಳ ನಿರ್ದೇಶಕ ಪರಮೇಶ ಅವರನ್ನು ತರಾಟೆಗೆ ತೆಗೆದುಕೊಂಡರು.
ಮಧ್ಯಪ್ರವೇಶಿಸಿದ ತಾಲೂಕು ಶಿರಸ್ತೇದಾರ್ ಉಮೇಶ್, ಇನ್ನೊಂದು ತಿಂಗಳಿನಲ್ಲಿ ಈ ಎಲ್ಲ ಕಡತಗಳನ್ನು ವಿಲೇವಾರಿ ಮಾಡಲಾಗುವುದು ಎಂದರು. ಇವರ ಮಾತಿನಿಂದ ಮತ್ತಷ್ಟು ಆಕ್ರೋಶಗೊಂಡ ಸಂಸದರು, ಒಂದು ತಿಂಗಳಿನಲ್ಲಿ ಕಡತ ವಿಲೇವಾರಿ ಮಾಡುವುದಾದರೆ ಏಕೆ ಇದುವರೆಗೆ ಇಟ್ಟುಕೊಂಡಿದ್ದೀರಿ. ಜುಲೈ ಅಂತ್ಯದ ವೇಳೆಗೆ ಕಡತಗಳು ವಿಲೇವಾರಿಯಾಗದಿದ್ದರೆ ನಿಮ್ಮಿಬ್ಬರ ಮೇಲೆ ಕ್ರಮಕ್ಕೆ ನಾನು ಶಿಫಾರಸು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಹಂಜುಗೋಡನಹಳ್ಳಿ ನಿವಾಸಿ ಪರಮೇಶ್ ಮಾತನಾಡಿ, ಕಳೆದ ವರ್ಷದ ಮಳೆಗಾಲದಲ್ಲಿ ನಮ್ಮ ಮನೆ ಬಿದ್ದಿದೆ. ಆದರೆ, ನಮಗೆ 14 ಸಾವಿರ ರೂ. ಮಾತ್ರ ಪರಿಹಾರ ನೀಡಲಾಗಿದೆ. ಉಳಿದವರಿಗೆ ಐದು ಲಕ್ಷ ರೂ. ವರೆಗೆ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಹಾನುಬಾಳ್ ಗ್ರಾಪಂ ಪಿಡಿಒ, ಗ್ರಾಮಲೆಕ್ಕಿಗರು ಕಂದಾಯ ನಿರೀಕ್ಷಕರ ವರದಿಯಂತೆ ಪರಿಹಾರ ನೀಡಲಾಗಿದೆ ಎಂದರು. ಈ ವೇಳೆ ಮಾತನಾಡಿದ ಸಂಸದರು ಯಾರ‌್ಯಾರೋ ಕೋಟ್ಯಂತರ ರೂ. ಹಣ ತಿನ್ನುತ್ತಾರೆ. ಪಾಪದವರಿಗೆ ಮಾನವೀಯ ಆಧಾರದ ಮೇಲೆ ಪರಿಹಾರ ನೀಡಿದರೆ ಅಧಿಕಾರಿಗಳು ಏನು ಕಳೆದುಕೊಳ್ಳುತ್ತೀರಿ ಎಂದರು.
ಕೇವಲ ಹಣಕ್ಕಾಗಿ ಕಡತಗಳನ್ನು ನಿಮ್ಮಲ್ಲಿ ಇಟ್ಟುಕೊಳ್ಳಬೇಡಿ, ನಿಮಗೆ ಅವುಗಳು ಕೇವಲ ಕಡತಗಳಾಗಿ ಕಾಣುತ್ತವೆ. ಆದರೆ, ರೈತರಿಗೆ ಅದು ಜೀವನಾಂಶವಾಗಿವೆ. ಬಗೆಹರಿಯಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿ ಎಂದು ಹಾನುಬಾಳ್ ಕಂದಾಯ ನಿರೀಕ್ಷಕ ಚಂದ್ರಶೇಖರ್ ಅವರಿಗೆ ಸೂಚನೆ ನೀಡಿದರು.
ಹಾನುಬಾಳ್ ಗ್ರಾ.ಪಂ. ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಸಂತೋಷ್, ಸದಸ್ಯರಾದ ಗಿರೀಶ್, ಕೇಶವಮೂರ್ತಿ, ಅಚ್ಚರಡಿಮೋಹನ್, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರು ಮುಂತಾದವರು ಉಪಸ್ಥಿತರಿದ್ದರು.
16 ಎಸ್‌ಕೆಪಿಪಿ 1 ಸಂಸದ ಪ್ರಜ್ವಲ್ ರೇವಣ್ಣ ಹಾನುಬಾಳ್ ಗ್ರಾಪಂ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ಉದ್ಘಾಟಿಸಿದರು.