

ಗುಂಡ್ಲುಪೇಟೆ: ಕರ್ತವ್ಯದಲ್ಲಿರುವಾಗಲೇ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ದಿನಗೂಲಿ ನೌಕರನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಸಾರ್ವಜನಿಕರು ಹಾಗೂ ದಿನಗೂಲಿ ನೌಕರ ಸಂಘಟನೆಯಿಂದ ಮದ್ದೂರು ವಲಯ ಅರಣ್ಯ ಕಚೇರಿ ಎದುರು ಮೃತದೇಹವಿಟ್ಟುಕೊಂಡು ಪ್ರತಿಭಟನೆ ನಡೆಸಿದರು.
ಅರಣ್ಯ ಇಲಾಖೆಯಲ್ಲಿ ಕೆಲ ದಿನಗಳ ಹಿಂದೆ ಪಾರ್ಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಗೋಪಾಲಪುರ ಗ್ರಾಮದ ಮಹೇಶ್(55) ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಆದರೆ, ಅರಣ್ಯ ಇಲಾಖೆ ಅವರಿಗೆ ಯಾವುದೇ ಸವಲತ್ತುಗಳನ್ನು ನೀಡಲು ನಿರಾಕರಿಸಿದೆ ಎಂದು ರೊಚ್ಚಿಗೆದ್ದ ಗೋಪಾಲಪುರ, ಸುತ್ತ್ತಲಿನ ಗ್ರಾಮಸ್ಥರು ಹಾಗೂ ಹೊರಗುತ್ತಿಗೆ ನೌಕರರು ಸಂಘದ ಅಧ್ಯಕ್ಷ ನಾಗರಾಜು ನೇತೃತ್ವದಲ್ಲಿ ಮದ್ದೂರು ವಲಯ ಅರಣ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಹೇಶ್ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ 25 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದು ಕಳ್ಳಬೇಟೆಗಾರರಿಗೆ ದುಸ್ವಪ್ನವಾಗಿದ್ದ. ಆದರೆ, ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಗೆ ಯಾವುದೇ ಸವಲತ್ತುಗಳನ್ನು ನೀಡದೆ ಶೋಷಣೆ ಮಾಡುತ್ತಿದೆ. ರಾತ್ರಿ ವೇಳೆ ಕರ್ತವ್ಯಕ್ಕೆ ಹೋಗುವ ಸಿಬ್ಬಂದಿಗೆ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಿಲ್ಲ. ಈ ಕಾರಣದಿಂದಲೇ ಮಹೇಶ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೃತನ ಕುಟುಂಬಕ್ಕೆ ಅರಣ್ಯ ಇಲಾಖೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಸುರೇಶ್ ಮತ್ತು ಮದ್ದೂರು ವಲಯ ಅರಣ್ಯಾಧಿಕಾರಿ ಮಾತುಕತೆಗೆ ಮುಂದಾದರೂ ಒಪ್ಪದೆ ಸ್ಥಳಕ್ಕೆ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬರುವಂತೆ ಪಟ್ಟುಹಿಡಿದಿದ್ದಾರೆ.