

ದೇವದುರ್ಗ: ಅರಕೇರಾ ತಾಲೂಕಿಗೆ ಸೇರ್ಪಡೆ ಮಾಡಿದ ರಾಮದುರ್ಗ ಗ್ರಾಪಂಯನ್ನು ಕೈಬಿಟ್ಟು ದೇವದುರ್ಗ ತಾಲೂಕಿನಲ್ಲೆ ಮುಂದುವರಿಸಲು ಒತ್ತಾಯಿಸಿ ರಾಯಚೂರಿನಲ್ಲಿ ಜಿಲ್ಲಾಧಿಕಾರಿ ನಿತೀಶ್‌ಕುಮಾರ್‌ಗೆ ಸುಂಕೇಶ್ವರಹಾಳ ಸೇರಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಸ್ಥರು ಗುರುವಾರ ಮನವಿ ಸಲ್ಲಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನರ ಅಭಿಪ್ರಾಯ ಪಡೆಯದೆ ಅರಕೇರಾ ತಾಲೂಕು ರಚನೆ ಮಾಡಿ ಅವೈಜ್ಞಾನಿಕವಾಗಿ ಹಲವು ಗ್ರಾಪಂಗಳನ್ನು ಸೇರ್ಪಡೆ ಮಾಡಲಾಗಿದೆ. ನಮಗೆ ಅರಕೇರಾ 45-50ಕಿಮೀ ದೂರವಾಗಲಿದೆ. ಅರಕೇರಾದಲ್ಲಿ ಯಾವುದೇ ಮೂಲಸೌಕರ್ಯಗಳು ಇಲ್ಲದೇ ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರಿ ದಾಖಲೆಗಳು, ಪಹಣಿ, ಮುಟೇಶನ್, ವಿದ್ಯಾರ್ಥಿಗಳ ಪ್ರಮಾಣ ಪತ್ರ, ರೈತರ ಕೃಷಿ ಉಪಕರಣಗಳನ್ನು ಪಡೆಯಲು ದಿನನಿತ್ಯ ಅಲೆದಾಡುವಂತಾಗಿದೆ. ಅರಕೇರಾಕ್ಕೆ ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ.
ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು, ಅಂಗವಿಕಲರಿಗೆ ಸಮಸ್ಯೆಯಾಗಲಿದೆ. ದೇವದುರ್ಗಕ್ಕೆ ಕೇವಲ 20 ಕಿಮೀ ಅಂತರದಲ್ಲಿದೆ. ಗಬ್ಬೂರು ಹೋಬಳಿಯಲ್ಲಿ ಸೌಕರ್ಯಗಳು ಹಾಗೂ ಸೌಲಭ್ಯಗಳು ಸಿಗುತಿದ್ದವು. ಈಗ ಅರಕೇರಾ ತಾಲೂಕಿನಲ್ಲಿ ಒಂದೇ ಹೋಬಳಿ ಮಾಡಿಕೊಂಡಿದ್ದರಿಂದ ದಾಖಲೆಗಳಿಗಾಗಿ ಪರದಾಡುವಂತಾಗಿದೆ ಎಂದು ದೂರಿದರು.
ಕೂಡಲೇ ಗ್ರಾಮಕ್ಕೆ ಅಧಿಕಾರಿಗಳನ್ನು ಕಳಿಸಿ ಗ್ರಾಮದ ಜನರ ಅಭಿಪ್ರಾಯ ಪಡೆದು ದೇವದುರ್ಗ ತಾಲೂಕಿನಲ್ಲಿ ಮುಂದುವರಿಸಬೇಕು. ನಿರ್ಲಕ್ಷ್ಯ ಮಾಡಿದರೆ ಮುಂದಿನ ತಾಪಂ, ಜಿಪಂ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ವಿರೂಪಾಕ್ಷಪ್ಪ ಮಾಸ್ಟರ್, ಪರಮಾನಂದ, ಮಲ್ಲನಗೌಡ, ಶರಣಗೌಡ ಸುಂಕೇಶ್ವರಹಾಳ, ವೀರೇಶಪ್ಪ ಸಾಹುಕಾರ್, ಮರಿಯಪ್ಪ ಜಗ್ಲಿ, ನಾಗಪ್ಪ ಮಡಿವಾಳ, ರಂಗಯ್ಯ ಗುತ್ತೇದಾರ್, ಶಂಕರಲಿಂಗ, ಬಸಪ್ಪ ಸಾಹುಕಾರ, ಲಿಂಗನಗೌಡ, ಅಂಜಿನೇಯ ಬಡಿಗೇರ, ಶಿವರಾಜಪ್ಪಗೌಡ, ಮಹ್ಮದ್ ಅಲಿ, ರಾಚಪ್ಪ ಉಪ್ಪಾರ, ಕರಿಯಪ್ಪ ಉಪ್ಪಾರ, ರಾಚೋಟಿ ಸಾಹುಕಾರ, ಚಂದ್ರಶೇಖರ ಸಾಹುಕಾರ ಇದ್ದರು.