

ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಆಯುಧಗಳಿಗೆ ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧಪೂಜೆ ಹಬ್ಬವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶುಚಿಗೊಳಿಸಿದ್ದ ಆಯುಧಗಳು ಮತ್ತು ವಾಹನಗಳಿಗೆ ಶಾಸಕ ಎ.ಟಿ. ರಾಮಸ್ವಾಮಿ ಪೂಜೆ ಸಲ್ಲಿಸಿ ಮಾತನಾಡಿ, ಪ್ರತಿಯೊಬ್ಬರೂ ಮನೆ, ಮನಗಳನ್ನು ಕೂಡ ಶುಚಿಗೊಳಿಸಿಕೊಳ್ಳಬೇಕು. ಎಲ್ಲ ಆಯುಧಗಳು ವಾಹನಗಳನ್ನು ಸ್ವಚ್ಚಗೊಳಿಸಿ ಸನ್ನದ್ಧವಾಗಿ ಇರಿಸಿಕೊಳ್ಳಬೇಕು ಎಂಬುದು ಆಯುಧಪೂಜೆ ಉದ್ದೇಶ. ಅದರಂತೆ ಶರೀರದ ಹೊರಗೆ ಹಾಗೂ ಒಳಗಿನ ಅಂತಃರಂಗವನ್ನು ಶುಚಿಯಾಗಿರಿಸಿ ಸನ್ನದ್ಧವಾಗಿಸುವ ಒಂದು ಪ್ರೇರಣೆಯನ್ನು ದೇವರು ಕರುಣಿಸಲಿ, ಸಕಲ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಹಾರೈಸಿದರು.
ಪಪಂ ಮುಖ್ಯಾಧಿಕಾರಿ ಬಸವರಾಜು, ಸದಸ್ಯರಾದ ಕೃಷ್ಣಯ್ಯ, ಅನಿಕೇತನ್, ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ಶಶಿಕುಮಾರ್, ತಾಲೂಕು ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿರೂಪಾಕ್ಷ, ಅರ್ಚಕ ಶ್ರೀನಿವಾಸ್, ಆರೋಗ್ಯ ನಿರೀಕ್ಷಕ ಲಿಂಗರಾಜು, ಪೌರ ಕಾರ್ಮಿಕರು, ಪಪಂ ಸಿಬ್ಬಂದಿ ಇದ್ದರು.