ಅರಕಲಗೂಡು ತಾಲೂಕಿನಾದ್ಯಂತ ಮನೆ ಮಾಡಿದ ಸಂಭ್ರಮ

19ark-1
ಅರಕಲಗೂಡು ಐತಿಹಾಸಿಕ ಕೋಟೆ ಕೊತ್ತಲು ಗಣಪತಿ ದೇವಸ್ಥಾನ ಸನ್ನಿಧಿಯಲ್ಲಿ 52ನೇ ಗಣೇಶೋತ್ಸವ ಪ್ರಯುಕ್ತ ಪ್ರತಿಷ್ಠಾಪಿಸಿರುವ ವಿನಾಯಕನ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.
Published on

ಅರಕಲಗೂಡು: ತಾಲೂಕಿನಾದ್ಯಂತ ಸೋಮವಾರ ಗೌರಿ-ಗಣೇಶ ಹಬ್ಬವನ್ನು ಭಕ್ತರು ಸಡಗರ ಸಂಭ್ರಮದಿಂದ ಆಚರಿಸಿದರು.

ಈ ಬಾರಿ ಗೌರಿ ಮತ್ತು ಗಣೇಶನ ಹಬ್ಬ ಒಂದೇ ದಿನ ಬಂದಿರುವುದರಿಂದ ಜನರು ತಮ್ಮ ಮನೆಗಳಲ್ಲಿ ಗೌರಿ-ಗಣೇಶನನ್ನು ಒಟ್ಟಿಗೆ ಪೂಜಿಸಿದರು. ಹೆಣ್ಣು ಮಕ್ಕಳು ತಮ್ಮ ತವರು ಮನೆಯಿಂದ ಬಾಗಿನ ಪಡೆದರು.

ಈ ಮಧ್ಯೆ, ಸಾರ್ವಜನಿಕ ಗಣೇಶೋತ್ಸವ ಆಯೋಜಿಸುವ ಸಂಘ-ಸಂಸ್ಥೆಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗಣಪತಿ ವಿಗ್ರಹಗಳನ್ನು ಸೋಮವಾರ ಪ್ರತಿಷ್ಠಾಪಿಸಿದವು. ಪಟ್ಟಣ ಪ್ರದೇಶಗಳ ಬಡಾವಣೆ, ವಿವಿಧ ಗ್ರಾಮಗಳಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಾ ವಿಧಾನಗಳನ್ನು ಕೈಗೊಳ್ಳಲಾಗಿದೆ.
ಪಟ್ಟಣದ ಇತಿಹಾಸ ಪ್ರಸಿದ್ಧವಾಗಿರುವ ಪಾಳೇಗಾರರ ಕೋಟೆ ಗಣಪತಿ ಕೊತ್ತಲಿನಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ 52ನೇ ವರ್ಷದ ಗಣೇಶ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಅರಕಲಗೂಡಿನ ಪಾಳೇಗಾರ ಕೃಷ್ಣಪ್ಪನಾಯಕನ ಆಳ್ವಿಕೆಯ ಇತಿಹಾಸ ಪ್ರಸಿದ್ಧವಾಗಿರುವ ಕೋಟೆ ಗಣಪತಿ ಕೊತ್ತಲಿಗೆ ಪ್ರತಿದಿನವೂ ನೂರಾರು ಭಕ್ತಾದಿಗಳು ಗಣಪತಿ ಕೊತ್ತಲಿನ ದೇವರ ದರ್ಶನಕ್ಕೆ ಮತ್ತು ಅರಳಿಮರ, ಬನ್ನಿಮರ, ಎಕ್ಕದ ಗಿಡದ ಪೂಜೆಗಾಗಿ ಆಗಮಿಸುವ ಭಕ್ತಿಯ ಸ್ಥಳವಾಗಿದ್ದು. ಕೋಟೆ ಗಣಪತಿ ಕೊತ್ತಲಿನ ಸ್ಥಳದಲ್ಲಿ ಪ್ರತಿವರ್ಷವೂ ಗಣೇಶ ಮಹೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಶಾಲಾ-ಕಾಲೇಜಿನ ವಾರ್ಷಿಕೋತ್ಸವಗಳು, ಸಾರ್ವಜನಿಕರ ಇತರ ಸಭೆಗಳು ನಡೆದುಕೊಂಡು ಬರುತ್ತಿವೆ.

ಪ್ರತಿ ವರ್ಷದಂತೆ ಈ ವರ್ಷವೂ ಅ.6ರವರೆಗೆ 18 ದಿನಗಳು ಗಣೇಶ ಮಹೋತ್ಸವ ಜರುಗಲಿದೆ. ಪ್ರತಿದಿನ ವಿಶೇಷ ಪೂಜೆಗಳು ನಡೆಯಲಿದ್ದು, ಮಧ್ಯಾಹ್ನ ಪ್ರಸಾದ ವಿತರಿಸಲಾಗುತ್ತದೆ. ಈ ವಿಶೇಷ ಪೂಜೆಯಲ್ಲಿ ಭಕ್ತರು ಸರತಿಯಲ್ಲಿ ಬಂದು ಗಣಪನ ದರ್ಶನ ಪಡೆದು ತನ್ನ ಇಷ್ಟಾರ್ಥಗಳನ್ನು ಬೇಡಿಕೊಂಡರು. 18 ದಿನಗಳ ಕಾಲ ಪೂಜೆ ನಡೆಯಲಿದ್ದು ಈ ಪೂಜೆಯಲ್ಲಿ ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ತಾಲೂಕಿನ ರಾಮನಾಥಪುರ, ಕೊಣನೂರು, ಬಸವಾಪಟ್ಟಣ, ಕೇರಳಾಪುರ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಹಬ್ಬದ ವಾತಾವರಣ ಮನೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net