ಅರಕಲಗೂಡು: ತಾಲೂಕಿನ ವಿವಿಧೆಡೆ ಮಳೆ ಹಾನಿ ಪ್ರದೇಶಕ್ಕೆ ಮಾಜಿ ಸಚಿವ ಎ.ಮಂಜು ಮಂಗಳವಾರ ಭೇಟಿ ನೀಡಿ ವೀಕ್ಷಿಸಿದರು.
ಬಿರುಕು ಬಿಟ್ಟಿದ್ದ ಕೊಣನೂರು ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ರಾಮನಾಥಪುರ ಸುಬ್ರಹ್ಮಣ್ಯ ದೇವಸ್ಥಾನ ಬಳಿಯ ರಾಜಕಾಲುವೆ ಮುಚ್ಚಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಮೂವತ್ತು ಮನೆಗಳಿಗೆ ನೀರು ನುಗ್ಗಿದ್ದ ಸ್ಥಳ ಮತ್ತು ದುಮ್ಮಿ ಸಮೀಪದ ಮಲ್ಲಾಪುರ ಕೆರೆ ಏರಿ ಒಡೆದು ರಸ್ತೆ ಕುಸಿದಿದ್ದ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಭಾರಿ ಮಳೆಗೆ 50 ಕೋಟಿ ರೂ. ನಷ್ಟವಾಗಿದ್ದು ಮನೆ, ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹತ್ತಾರು ಕೆರೆಗಳು ಒಡೆದಿವೆ. ಸಂತ್ರಸ್ತರು ತುರ್ತಾಗಿ ಮನೆ ಕಟ್ಟಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ರೆಡಿಮೇಡ್ ಮನೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಕೊಣನೂರು ಕೆರೆ ಹಳೇ ರಸ್ತೆಯ ಡಾಂಬರ್ ತೆಗೆಯದೆ ಅದರ ಮೇಲೆಯೇ ಮಣ್ಣು ಹಾಕಿದ್ದಾರೆ. ಇದರಿಂದ ರಸ್ತೆ ಕುಸಿದಿದೆ. ಜತೆಗೆ ಈ ರಸ್ತೆಯಲ್ಲಿ ಭಾರಿ ಗಾತ್ರದ ವಾಹನ ಓಡಾಡುತ್ತಾವೆಂದು ಯೋಚಿಸಿ ನಿರ್ಮಿಸಿಲ್ಲ ಎಂದು ತಿಳಿಸಿದರು.
ರಾಮನಾಥಪುರದಲ್ಲಿ ರಾಜ ಕಾಲುವೆಯನ್ನು ಮುಚ್ಚಿದ್ದು ನೀರು ನಿಲ್ಲಲು ಕಾರಣವಾಗಿದೆ. ಈ ಕಾಲುವೆ ಮುಚ್ಚುವ ವೇಳೆ ಗ್ರಾಪಂ ಪಿಡಿಒ ತಡೆದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಮಣ್ಣಿನ ಮನೆಗಳಿದ್ದು, ಬಿದ್ದು ಹೋಗುತ್ತಿವೆ. ಪರಿಹಾರ ನೀಡಿದರೆ ಸಾಲದು ಶಾಶ್ವತ ಪರಿಹಾರ ನೀಡಬೇಕು. ಅದಕ್ಕಾಗಿ ರಾಜಕಾಲುವೆ ತೆರೆದು ನೀರು ಸರಾಗವಾಗಿ ಹರಿಯುವಂತಾಗಬೇಕು ಎಂದು ಆಗ್ರಹಿಸಿದರು.