ಅರಕಲಗೂಡು ಅಭಿವೃದ್ಧಿಗೆ ಮೊದಲ ಆದ್ಯತೆ

28ark3
Published on

ಅರಕಲಗೂಡು: ಪಟ್ಟಣದ ನಿವಾಸಿಗಳು ಚುನಾವಣೆಯಲ್ಲಿ ನನಗೆ ಆಶೀರ್ವದಿಸಿದರೆ ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಬಡಾವಣೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂ.ಟಿ.ಕೃಷ್ಣೇಗೌಡ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ದಿನವಿಡೀ ಮಾರುಕಟ್ಟೆ ಪ್ರದೇಶದಲ್ಲಿ ಮತ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಲಭ್ಯಗಳಿಲ್ಲದ ಸಂತೆ ಮಾರುಕಟ್ಟೆಯಲ್ಲಿ ಮಳೆ ಬಂದರೆ ವ್ಯಾಪಾರಿಗಳ ಫಜೀತಿ ಅಷ್ಟಿಷ್ಟ್ಟಲ್ಲ. ಇಪ್ಪತ್ತು ಸಾವಿರ ಜನಸಂಖ್ಯೆ ಇರುವ ಪಟ್ಟಣದ ಬಡಾವಣೆಗಳಿಗೆ ಈವರೆಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿರುವುದು ನೋವಿನ ಸಂಗತಿ ಎಂದರು.

ಹಲವಾರು ವಾರ್ಡ್‌ಗಳು, ಜನವಸತಿ ಪ್ರದೇಶಗಳಲ್ಲಿ ಮೂಲಸೌಕರ್ಯವಿಲ್ಲ. ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಣದೆ ಗಬ್ಬೆದ್ದು ಹಾಳಾಗಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ, ನಿರುದ್ಯೋಗಿಗಳಿಗೆ ಉದ್ಯೋಗ ಸೇರಿದಂತೆ ಬಡ ವರ್ಗದ ಜನರ ಆರ್ಥಿಕ ಏಳಿಗೆಗೆ ಆದ್ಯತೆ ನೀಡಲಾಗುವುದು. ಮತದಾರರು ಪಕ್ಷಭೇದ ಮರೆತು ಚುನಾವಣೆಯಲ್ಲಿ ನನಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸೇರ್ಪಡೆ: ಪಟ್ಟಣ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಮತ ಪ್ರಚಾರ ನಡೆಸಿದರು. ಹೆಂಟಗೆರೆ ಕೊಪ್ಪಲಿನಲ್ಲಿ ನಡೆದ ಮತ ಪ್ರಚಾರದ ವೇಳೆ ಮುಖಂಡರಾದ ಹೊಸಳ್ಳಿ ವೆಂಕಟೇಶ್, ಮಾಗೋಡು ಕುಮಾರ್ ಅವರನ್ನು ಕೃಷ್ಣೇಗೌಡ ಸ್ವಾಗತಿಸಿದರು. ಮುಖಂಡರಾದ ಎಂ.ಆರ್. ರಂಗಸ್ವಾಮಿ, ಮದಲಾಪುರ ಮಂಜುನಾಥ್, ಕೇಶವಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net