ಅರಕಲಗೂಡಿನಲ್ಲಿ ಅಬ್ಬರಿಸಿದ ವರುಣ

26ark2
Published on

ಅರಕಲಗೂಡು: ತಾಲೂಕಿನಲ್ಲಿ ಮುಂದುವರಿದ ಮಳೆಗೆ ಜನ ತತ್ತರಿಸಿದ್ದು, ಸೋಮವಾರವೂ ಧಾರಾಕಾರವಾಗಿ ಸುರಿಯಿತು. ಮಳೆ ಆರ್ಭಟಕ್ಕೆ ರಸ್ತೆಗಳು, ಚರಂಡಿಗಳು ತುಂಬಿ ಹರಿಯುತ್ತಿವೆ. ಪಟ್ಟಣದ ಬೈಪಾಸ್ ರಸ್ತೆಯ ಹಳ್ಳದಲ್ಲಿ ದುರಸ್ತಿಯಾಗಿರುವ ರಾಜಕಾಲುವೆ ಕಟ್ಟಿಕೊಂಡು ಸೋಮವಾರ ಅಕ್ಕಪಕ್ಕದ ಕಟ್ಟಡಗಳು ಮಳೆಗೆ ಜಲಾವೃತಗೊಂಡಿದ್ದವು. ಪಪಂ ಆರೋಗ್ಯ ನಿರೀಕ್ಷಕ ದೀಕ್ಷಿತ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಜೆಸಿಬಿ ಮೂಲಕ ಕಾಲುವೆಗೆ ಕಟ್ಟಿಕೊಂಡ ತ್ಯಾಜ್ಯ ತೆರವುಗೊಳಿಸಿ ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯುವಂತೆ ಮಾಡಿದರು.

ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನರು ಮನೆಯಿಂದ ಹೊರ ಹೋಗಲು ಅಸಾಧ್ಯ ಎಂಬಂತಾಗಿದೆ. ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳದಂತೆ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶದ ಬೆಳೆ ಜಮೀನಿನಲ್ಲಿ ನೀರು ನಿಂತು ಬಿತ್ತಿದ್ದ ಬೆಳೆಗಳು ಕೊಳೆತು ಹಾಳಾಗುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

ಮನೆಗೆ ಹಾನಿ: ದೊಡ್ಡಮಗ್ಗೆ ಹೋಬಳಿ ಮುಗಳೂರು ಗ್ರಾಮದಲ್ಲಿ ಮಳೆಯಿಂದಾಗಿ ಮಮತಾ ಎಂಬುವರ ಮನೆ ಮೇಲೆ ಪಕ್ಕದಲ್ಲಿದ್ದ ತೇಗದ ಮರ ಬಿದ್ದು ಗೋಡೆ ಕುಸಿದಿದೆ. ಸೋಮವಾರ ಕಂದಾಯ ಇಲಾಖೆ ಅಧಿಕಾರಿ ಧರ್ಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಳೆ ವಿವರ: ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಮಲ್ಲಿಪಟ್ಟಣದಲ್ಲಿ 80 ಮಿಮೀ ಅಧಿಕ ಮಳೆಯಾಗಿದೆ. ಇನ್ನುಳಿದಂತೆ ಕಸಬಾ 50.6 ಮಿಮೀ, ದೊಡ್ಡಮಗ್ಗೆ 52.3 ಮಿಮೀ, ಕೊಣನೂರು, ರಾಮನಾಥಪುರ ತಲಾ 35 ಮಿಮೀ, ದೊಡ್ಡಬೆಮ್ಮತ್ತಿ 42.8 ಮಿಮೀ, ಬಸವಾಪಟ್ಟಣದಲ್ಲಿ 44.8 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net