

ಚಿತ್ರದುರ್ಗ: ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ಸನ್ನಿಧಾನದ ರಜತ ಮಹೋತ್ಸವ, ದ್ವಿತೀಯ ಮಹಾಕುಂಭಾಭಿಷೇಕದ ಅಂಗವಾಗಿ ಮಂಗಳವಾರ ಸಕಲ ಸಿದ್ಧತೆಯೊಂದಿಗೆ ಶಾಸ್ತ್ರೋಕ್ತವಾಗಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ದೇಗುಲದ ಅಯ್ಯಪ್ಪಸ್ವಾಮಿ, ಶಿವ, ಪಾರ್ವತಿ, ಮಹಾವಿಷ್ಣು, ಮಹಾಲಕ್ಷ್ಮೀ, ಬ್ರಹ್ಮ, ಸರಸ್ವತಿ, ಮಹಾಗಣಪತಿ, ಸುಬ್ರಮಣ್ಯ, ಭೀಮಾಶಂಕರ, ಭೀಮಾಂಜನೇಯ ಸ್ವಾಮಿ, ಅನ್ನಪೂರ್ಣೇಶ್ವರಿ ದೇವಿಯ ಮೂರ್ತಿಯನ್ನು ವಿವಿಧ ಬಗೆಯ ಪುಷ್ಪಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕಾರ ಸೇವೆ ನೆರವೇರಿತು. ನೂರಾರು ಕುಂಭಗಳನ್ನು ವಸ್ತ್ರ, ಹೂವಿನಿಂದ ಸಿಂಗರಿಸಿ ಪೂಜಿಸಲಾಯಿತು.
ಸಂಹಾರ ತತ್ವ ಕಳಶಾಭಿಷೇಕ, ಕುಂಭೇಷ, ಪ್ರತಿಷ್ಠಾ ಹೋಮ, ಜೀವಕಳಸ ಪೂಜೆ, ಜೀವೋದ್ವಾಸನೆ, ಶ್ರೀಲಕ್ಷ್ಮೀನಾರಾಯಣ ಹೃದಯ ಹೋಮ, ಪೂರ್ಣಾಹುತಿ ನೆರವೇರಿತು. ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.
ಮಹಾಕುಂಭಾಭಿಷೇಕ 10ಕ್ಕೆ: ಮಹಾಕುಂಭಾಭಿಷೇಕವೂ ಜು. 10ರಂದು ಬೆಳಗ್ಗೆ 7.50ರಿಂದ 8.40ರ ಶುಭ ಮುಹೂರ್ತದಲ್ಲಿ ಪ್ರತಿಷ್ಠಾಪನೆ, ಬ್ರಹ್ಮ, ಕುಂಭೇಷ ಮತ್ತು ನಿದ್ರಾ ಕಳಶಾಭಿಷೇಕ, ಪ್ರತಿಷ್ಠಾ ಬಲಿ, ನಿತ್ಯ ನೈಮಿತ್ತಿಕ ನಿರ್ಧಾರ, ಪ್ರತಿಷ್ಟಾದಕ್ಷಿಣ ಪೂಜಾ ಕೈಂಕರ್ಯದೊಂದಿಗೆ ಆರಂಭವಾಗಲಿದೆ.
ಚಂಡಿಕಾ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಲಿದೆ. ನಂತರ ಬೆಂಗಳೂರಿನ ಡಾ.ಎಚ್.ಎಸ್.ಕಾರ್ತಿಕ್ ಮಹಾಕುಂಭಾಭಿಷೇಕ ಉದ್ಘಾಟಿಸುವರು. ಬೆಳಗ್ಗೆ 10ರಿಂದ ಸಂಜೆ 5ರ ವರೆಗೂ ಸರ್ವ ಭಕ್ತರು ಅಯ್ಯಪ್ಪಸ್ವಾಮಿಯ ಪವಿತ್ರ 18 ಮೆಟ್ಟಿಲು ಹತ್ತಲು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅವಕಾಶ ಕಲ್ಪಿಸಿದೆ. ಇದೇ ವೇಳೆ 20 ಸಾವಿರ ಭಕ್ತರಿಗೆ ಮಹಾ ಅನ್ನದಾನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ಸಂಸ್ಕಾರದ ಕೊರತೆ: ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದೆ. ಕೇವಲ ಅಂಕಗಳಿಸಲು ಗಮನ ಹರಿಸುತ್ತಿರುವ ಪಾಲಕರು ಸರ್ವತೋಮುಖ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಬಜರಂಗದಳದ ದಕ್ಷಿಣ ಪ್ರಾಂತೀಯ ಸಂಚಾಲಕ ಪ್ರಭಂಜನ್ ಸಲಹೆ ನೀಡಿದರು.
ಸ್ವಾಮಿಯ ದೇಗುಲದಲ್ಲಿ ಸೋಮವಾರ ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಕಾರ ಕಲಿಸಿದರೆ, ವೃದ್ಧಾಶ್ರಮ, ಅನಾಥಾಶ್ರಮಗಳ ಸಂಖ್ಯೆ ಕಡಿಮೆಯಾಗಲಿದೆ. ಪಾಲಕರನ್ನು ಕಾಳಜಿವಹಿಸಿ ನೋಡಿಕೊಳ್ಳುತ್ತಾರೆ ಎಂದರು.
ದೇಗುಲ ನಿರ್ಮಿಸಬಹುದು. ಆದರೆ, ಅದನ್ನು ಮುನ್ನಡೆಸುವುದು ಸುಲಭದ ಮಾತಲ್ಲ. ಆದರೆ, ಈ ಟ್ರಸ್ಟ್ ಪ್ರತಿ ವರ್ಷ ಉತ್ತಮ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುವಲ್ಲಿ ಸಫಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಯ್ಯಪ್ಪಸ್ವಾಮಿಯ ವ್ರತಾಚರಣೆಯೂ ತುಂಬಾ ಕಷ್ಟ. ಯಾತ್ರಾರ್ಥಿಗಳು, ಮಾಲಾಧಾರಿಗಳು ಸನ್ಮಾರ್ಗದಲ್ಲಿ ನಡೆಯುವ ಉದ್ದೇಶವನ್ನು ಒಳಗೊಂಡಿದೆ. ಸ್ವ-ಹಿತಾಸಕ್ತಿಗಾಗಿ ಕೆಲ ಹಿಂದುಗಳು ಮತಾಂತರವಾಗುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲ. ಧರ್ಮ ಕಾಪಾಡಬೇಕೆ ಹೊರತು ಅಧರ್ಮ ಮಾರ್ಗ ಅನುಸರಿಸಬಾರದು ಎಂದು ಸಲಹೆ ನೀಡಿದರು.
ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್ ಮಾತನಾಡಿ, 12 ವರ್ಷಕ್ಕೊಮ್ಮೆ ಮಹಾಕುಂಭಾಭಿಷೇಕ ನಡೆಯಲಿದ್ದು, 2ನೇ ಬಾರಿಗೆ ಆಚರಿಸಲಾಗುತ್ತಿದೆ. ಈ ದಿನದಂದು ಮಾತ್ರ ಎಲ್ಲ ಮಹಿಳೆಯರಿಗೂ 18 ಮೆಟ್ಟಿಲು ಹತ್ತಲು ಅವಕಾಶವಿದೆ. ಹೀಗಾಗಿ ಹೆಚ್ಚಿನ ಭಕ್ತರ ನಿರೀಕ್ಷೆ ಇದೆ ಎಂದು ತಿಳಿಸಿದರು.
ಮೆದೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಉಜ್ಜಿನಿಸ್ವಾಮಿ, ಐಶ್ವರ್ಯ ಫೋರ್ಟ್‌ನ ಅರುಣ್‌ಕುಮಾರ್, ಎಂ.ರವಿಶಂಕರ್, ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ಎವಿಒಪಿಎ ಉಪಾಧ್ಯಕ್ಷ ಪಿ.ಎಲ್.ಸುರೇಶ್‌ಬಾಬು, ಆದರ್ಶ ಟ್ರೇಡರ್ಸ್‌ನ ಪಟೇಲ್ ಶಿವಕುಮಾರ್, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಸ್.ಅರುಣ್‌ಕುಮಾರ್, ಜಯರಾಂ ಗ್ರೂಪ್ಸ್‌ನ ಮಾರುತಿ ಪ್ರಸನ್ನ, ಕ್ರೀಡಾ ಮಂಡಳಿ ಮಾಜಿ ಉಪಾಧ್ಯಕ್ಷ ಜಿ.ಎಂ.ಸುರೇಶ್, ಕಾವೇರಿ ಟ್ರೇಡರ್ಸ್‌ನ ಟಿ.ರಾಮರೆಡ್ಡಿ, ಮಲ್ಲಿಕಾರ್ಜುನ ಸ್ವಾಮಿ, ಮೋಹನ್‌ಕುಮಾರ್, ಚಂದ್ರಶೇಖರ್, ಸೂರಪ್ಪ, ಮಂಜುನಾಥ್, ಪ್ರಧಾನ ಅರ್ಚಕರಾದ ಸತೀಶ್ ಶರ್ಮಾ ಇತರರಿದ್ದರು.