

ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ಸನ್ನಿಧಿಯ 24ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಪ್ರತಿಷ್ಠಾಪನಾಂಗ ಹೋಮ, ವಾಸ್ತು ರಕ್ಷೋಜ್ಞ ಹೋಮ ಸಂಪನ್ನಗೊಂಡಿತು.
ಗಣಪತಿ ಪೂಜೆ, ಮಾತೃಕ ಆರಾಧನೆ, ಪಂಚಗವ್ಯ, ಪಂಚಗವ್ಯ ರಕ್ಷಾಬಂಧನ, ಕಲಶ ಸ್ಥಾಪನೆ, ಅಭಿ ವಾಸಂಗ ಪೂಜೆ ಹೋಮ, ಪ್ರಾಣ ಪ್ರತಿಷ್ಠಾಪನೆ, ಗೋಪೂಜೆ ನಿರೀಕ್ಷಣಾ ಬಲಿಹರಣ, ಕಲಶಾಭಿಷೇಕ ಪೂರ್ಣಹುತಿ ಮಹಾಮಂಗಳಾರತಿ ನೆರವೇರಿದವು.
ಶಿಥಿಲಾವಸ್ಥೆಯಲ್ಲಿದ್ದ ನಾಗಬನವನ್ನು ಪುನರುಜ್ಜೀವನಗೊಳಿಸಿ ನೂತನ ನಾಗ ಸನ್ನಿಧಿಯನ್ನು ಸ್ಥಾಪಿಸಲಾಗಿದ್ದು, ನಾಗದೇವತೆಗಳ ಪ್ರತಿಷ್ಠಾಪನೆಯೂ ಶಾಸ್ತ್ರೋಕ್ತವಾಗಿ ಜರುಗಿತು.
ಮಹೋತ್ಸವದ ಅಂಗವಾಗಿ ಮೂರು ದಿನವೂ ನಡೆದ ವಿಶೇಷ ಪೂಜಾ ಕೈಂಕರ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಈಡೇರಿಸುವಂತೆ ಅಯ್ಯಪ್ಪಸ್ವಾಮಿ, ಸುಬ್ರಮಣ್ಯ ಸ್ವಾಮಿ, ಗಣಪತಿ, ಭೀಮಶಂಕರ, ಭೀಮಾಂಜನೇಯ, ಅನ್ನಪೂರ್ಣೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿಕೊಂಡರು.
ದೇಗುಲದ ಪ್ರಧಾನ ಅರ್ಚಕ ಸತೀಶ್ ಶರ್ಮಾ ವಿವಿಧ ಪೂಜೆಗಳನ್ನು ನೆರವೇರಿಸಿದರು. ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್, ಕಾರ್ಯದರ್ಶಿ ಎಂ.ಪಿ.ವೆಂಕಟೇಶ್, ಉಪಾಧ್ಯಕ್ಷ ಮಲ್ಲಿಕಾರ್ಜುನ್, ನಿರ್ದೇಶಕರಾದ ಸೂರಪ್ಪ, ಮಂಜುನಾಥ್, ಚಂದ್ರಶೇಖರ್, ಮೋಹನ್‌ಕುಮಾರ್ ಇತರರಿದ್ದರು.