

ಮಡಿಕೇರಿ: ವಿರಾಜಪೇಟೆಯ ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ದೇವಾಲಯದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ಇತ್ತೀಚೆಗೆ ನಡೆಯಿತು.
ದೇವಾಲಯದ ಅರ್ಚಕರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಬೆಳಗ್ಗೆ ಗಣಪತಿ ಹೋಮ, ಚಂಡಿಕಾ ಹವನ, ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಮಧ್ಯಾಹ್ನ ಚಂಡಿಕಾ ಹವನ ಪೂರ್ಣಾಹುತಿ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನೆರವೇರಿತು.
ಅರ್ಚಕ ಚಂದ್ರಹಾಸ ಭಟ್ ನೇತೃತ್ವದಲ್ಲಿ ಲೋಕಕಲ್ಯಾಣಕ್ಕಾಗಿ ಚಂಡಿಕಾಯಾಗ ನೆರವೇರಿತು. ಭಕ್ತರು ಸ್ತೋತ್ರಗಳನ್ನು ಪಠಿಸುತ್ತಾ ಭಕ್ತಿ ಗೀತೆಗಳನ್ನು ಹಾಡಿದರು. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಪ್ರಾರ್ಥನೆ ಸಲ್ಲಿಸಿದರು. ಹಲವಾರು ಭಕ್ತರು ಮಣ್ಣಿನ ರೂಪದಲ್ಲಿರುವ ಮೂರ್ತಿಗಳನ್ನು ಹರಕೆಯಾಗಿ ದೇವರಿಗೆ ಅರ್ಪಿಸಿದರು.
ಕಾಸರಗೋಡಿನ ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಲ್ಚಾರು ರಾಮಚಂದ್ರನಾಯಕ್, ಆಡಳಿತ ಮಂಡಳಿ ಸದಸ್ಯರು, ಕಾರ್ಕಳದ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಾಲಯದ ಆಡಳಿತ ಮೊಕ್ತೇಸರರು ಅಶೋಕ್ ನಾಯಕ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು. ಮಹೋತ್ಸವದ ಅಂಗವಾಗಿ ದೇವಾಲಯವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು.