ಅಯೋಧ್ಯೆಯಲ್ಲಿ ರಾಷ್ಟ್ರ ಮಂದಿರ

Sidhharudh math
Published on

ಬೀದರ್: ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸಬೇಕಾದರೆ ಮಠ, ಮಂದಿರಗಳು ಬೇಕೇ ಬೇಕು. ಶ್ರೀರಾಮ ಮಂದಿರ ಕೇವಲ ದೇವಸ್ಥಾನವಲ್ಲ, ಅದೊಂದು ರಾಷ್ಟ್ರ ಮಂದಿರ ಎಂದು ಇಲ್ಲಿನ ಚಿದಂಬರಾಶ್ರಮ ಸಿದ್ಧಾರೂಢ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಹೇಳಿದರು.

ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣೆ ಅಭಿಯಾನ ನಿಮಿತ್ತ ಶನಿವಾರ ನಗರದ ಸಿದ್ಧಾರೂಢ ಮಹಾ ಶಕ್ತಿ ಕೇಂದ್ರದಲ್ಲಿ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೂ ಸಮಾಜ ಉಳಿಬೇಕು ಮತ್ತು ಬೆಳೆಯಬೇಕು ಎಂದರೆ ದೇವಸ್ಥಾನಗಳು ನಿರ್ಮಿಸಬೇಕು. ಮಂದಿರಗಳ ಮೂಲಕ ದೇಶದ ಜನರಿಗೆ ಭಾವನಾತ್ಮಕವಾಗಿ ಒಂದಾಗಿಸಿ ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿಮರ್ಾಣ ಸಂಬಂಧ ಹಲವು ಸಾಧು, ಸಂತರ, ಗಣ್ಯರ ಬಲಿದಾನ ನಡೆದಿದೆ. ಅನೇಕ ವರ್ಷಗಳ ಹೋರಾಟ, ತ್ಯಾಗದ ಪರಿಣಾಮವಾಗಿ ಜಯ ಸಿಕ್ಕಿದೆ. ಶ್ರೀರಾಮ ಮಂದಿರ ಯಾವುದೇ ಒಂದು ಜಾತಿ, ವ್ಯಕ್ತಿಗೆ ಸೀಮಿತವಲ್ಲ. ಹಿಂದೂ ಸಮುದಾಯದ ಆಸ್ತಿಯಾಗಿದೆ. ಮಂದಿರ ನಿಮಾಣಕ್ಕಾಗಿ ನಾವೆಷ್ಟು ದೇಣಿಗೆ ಕೊಡುತ್ತೇವೆ ಎನ್ನುವುದು ಮುಖ್ಯವಲ್ಲ. ಸಮರ್ಪಣೆಯ ಮನೋಭಾವ ಮುಖ್ಯ ಎಂದರು.

ಮಂದಿರ ಕಟ್ಟಲು ಬಹಳ ಜನ ಸಹಕಾರ ಮಾಡುವವರು ಇದ್ದಾರೆ. ಆದರೆ ಪೂಜೆ ಮಾಡುವವರ ಸಂಖ್ಯೆ ಇಂದು ಕಮ್ಮಿಯಾಗುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ಭಾರತೀಯರು ತನ್ನತನ ಮರೆಯುತ್ತಿರುವುದು ನೋವಿನ ಸಂಗತಿ. ಜಗತ್ತಿನಲ್ಲೇ ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಘನತೆ, ಗೌರವ ಇದೆ. ಇದನ್ನು ಉಳಿಸಿ, ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿ ಹಿಂದೂಗಳ ಮೇಲಿದೆ ಎಂದು ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ, ಚಳಕಾಪುರ ಸಿದ್ಧಾರೂಢ ಮಠದ ಶ್ರೀ ಶಂಕರಾನಂದ ಸ್ವಾಮೀಜಿ, ಎಂಎಲ್ಸಿ ರಘುನಾಥರಾವ ಮಲ್ಕಾಪುರೆ, ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ, ಪ್ರಮುಖರಾದ ಡಾ. ಬಸವರಾಜ ಪಾಟೀಲ್, ಸೋಮಶೇಖರ ಪಾಟೀಲ್ ಗಾದಗಿ, ಪ್ರಕಾಶ ಟೊಣ್ಣೆ, ರಾಮಕೃಷ್ಣನ್ ಸಾಳೆ, ಅಶೋಕ ಮಾನೂರೆ, ಪುಟ್ಟು ಪಾಟೀಲ್, ಗುರುನಾಥ ಜ್ಯಾಂತಿಕರ್, ಬಸವರಾಜ ಜೋಜನಾ, ನಾಗೇಶ ರೆಡ್ಡಿ, ಜೈಭೀಮ ಸೋಲಪುರೆ ಇತರರಿದ್ದರು.

ಪ್ರತಿಯೊಬ್ಬ ಭಾರತೀಯರಿಗೆ ಶ್ರೀರಾಮಚಂದ್ರರು ಆದರ್ಶಪುರುಷ. ಅವರ ಮೌಲಿಕ ವಿಚಾರ, ಆ ಕಾಲದ ರಾಮಾಯಣ ದೇಶದ ಶ್ರೇಷ್ಠ ಪರಂಪರೆಗೆ ಹಿಡಿದ ಕನ್ನಡಿ. ಜನ್ಮ ಸ್ಥಳದಲ್ಲಿ ಮಂದಿರದ ನಿರ್ಮಾಣಕ್ಕೆ ಈಗ ಕಾಲ ಕೂಡಿಬಂದಿರುವುದು, ಇದಕ್ಕೆ ನಿಧಿ ಸಮರ್ಪಿಸುವ ಅವಕಾಶ ನಮಗೆ ಸಿಕ್ಕಿರುವುದು ಸೌಭಾಗ್ಯವೇ ಸರಿ.| ಸ್ವಾಮಿ ಜ್ಯೋತಿರ್ಮಯಾನಂದರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ

ಅಯೋಧ್ಯೆಯಲ್ಲಿ ಭವ್ಯವಾಗಿ ತಲೆ ಎತ್ತಲಿರುವ ಶ್ರೀರಾಮ ಮಂದಿರ ನನ್ನ ಮಂದಿರ ಎನ್ನುವ ಭಾವನೆ ಎಲ್ಲರಲ್ಲಿ ಬರಬೇಕು. ಹೀಗಾಗಿ ಪ್ರತಿಯೊಂದು ಹಿಂದೂಗಳ ಮನೆಯಿಂದ ಹಣ ಸಂಗ್ರಹ ನಡೆದಿದೆ. ಈ ಪವಿತ್ರ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು.| ಶ್ರೀ ಡಾ.ಶಿವಕುಮಾರ ಸ್ವಾಮೀಜಿಸಿದ್ಧಾರೂಢ ಮಠ ಬೀದರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net