

ಬೇಲೂರು: ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ತಂದಿದ್ದ ಮಂತ್ರಾಕ್ಷತೆಗೆ ಹೆಗ್ಗಡಿಹಳ್ಳಿಯ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆ ಮನೆಗೂ ವಿತರಿಸಲಾಗುತ್ತದೆ ಎಂದು ರೇಹಳ್ಳಿ ಹೋಬಳಿ ಬಿಜೆಪಿ ಮುಖಂಡ ಬಸವರಾಜು ಹೇಳಿದರು.
ತಾಲೂಕಿನ ಅರೇಹಳ್ಳಿ ಹೋಬಳಿ ಹೆಗ್ಗಡಿಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ತಂದಿದ್ದ ಮಂತ್ರಾಕ್ಷತೆಗೆ ಬುಧವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಹಿಂದು ಧರ್ಮದ ಪ್ರತೀಕವಾಗಿರುವ ಶ್ರೀರಾಮನ ಬೃಹತ್ ದೇವಾಲಯ ಉದ್ಘಾಟನೆಯಾಗುತ್ತಿರುವುದು ಸಂತಸದ ವಿಚಾರ. ಈ ನಿಟ್ಟಿನಲ್ಲಿ ನೂತನ ದೇವಾಲಯದ ಲೋಕಾರ್ಪಣೆಯ ಆನಂದವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇವೆ. ಮಂತ್ರಾಕ್ಷತೆಯನ್ನು ಪಂಚಾಯಿತಿ ವ್ಯಾಪ್ತಿಯ ಎಲ್ಲ ಮನೆಗಳಿಗೂ ಹಂಚಲಾಗುವುದು. ಅಲ್ಲದೆ ನಮ್ಮ ವ್ಯಾಪ್ತಿಯಲ್ಲಿ ಜ.22 ರಂದು ಯಾವುದಾದರೂ ಒಂದು ಗ್ರಾಮವನ್ನು ಆಯ್ಕೆ ಮಾಡಿ, ಅನ್ನ ಸಂತರ್ಪಣೆ ನೆರವೇರಿಸಲು ಕಾರ್ಯಕರ್ತರು ಸಿದ್ಧರಾಗಿದ್ದಾರೆ ಎಂದರು.
ಅರೇಹಳ್ಳಿ ಬಿಜೆಪಿ ಘಟಕದ ಯುವ ಮೋರ್ಚಾ ಅಧ್ಯಕ್ಷ ಚಂದನ್, ರಘು, ಅರ್ಚಕ ಪ್ರತಾಪ್, ಪರಮೇಶ್ ಸೇರಿದಂತೆ ಇತರರಿದ್ದರು.