

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಹೋಬಳಿಯಿಂದ ಹನುಮಂತ ಹೆಸರಿನ ಬಸವ ತೀರ್ಥಯಾತ್ರೆಗೆ ಹೊರಡುವ ಮೂಲಕ ಗಮನ ಸೆಳೆದಿದೆ. ಸಾಮಾನ್ಯವಾಗಿ ಹಿರಿಯರು ಜೀವಿತಾವಧಿಯ ಸಂಧ್ಯಾಕಾಲದಲ್ಲಿ ಪುಣ್ಯ ಕ್ಷೇತ್ರಗಳಿಗೆ ತೀರ್ಥಯಾತ್ರೆಗೆ ಹೊಗುವುದು ಸಾಮಾನ್ಯ. ಆದರೆ ಇಲ್ಲಿನ ಪೆರಮಗೊಂಡನಹಳ್ಳಿಯ ದಿನ್ನೆ ಆಂಜನೇಯಸ್ವಾಮಿ ದೇವಸ್ಥಾನದ ಅರ್ಚಕ ವಾಸುದೇವಾಚಾರ್ ಅವರು ಬಸವನನ್ನು ತೀರ್ಥಯಾತ್ರೆಗೆ ಕರೆದೊಯ್ಯುತ್ತಿದ್ದು, ಇದಕ್ಕಾಗಿಯೇ ವಿಶೇಷ ವಾಹನ ಸಿದ್ಧಪಡಿಸಿದ್ದಾರೆ.
ಶ್ರೀರಾಮನ ಪರಮಭಕ್ತರಾಗಿರುವ ವಾಸುದೇವಾಚಾರ್ ಅವರು ಎತ್ತೊಂದನ್ನು ಸಾಕಿ ಅದಕ್ಕೆ ಹನುಮಂತ ಎಂದು ನಾಮಕರಣ ಮಾಡಿದ್ದಾರೆ. ಹನುಮಂತ ಹೆಸರಿನ ಬಸವನನ್ನು ಅಯೋಧ್ಯೆಯ ಶ್ರೀರಾಮನ ದರ್ಶನ ಮಾಡಿಸಬೇಕೆಂಬ ಸಂಕಲ್ಪ ತೊಟ್ಟು ಇದಕ್ಕಾಗಿಯೇ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಹನುಮಂತನ ಕರೆದೊಯ್ಯಲು 30 ಲಕ್ಷ ರೂ.ವೆಚ್ಚದಲ್ಲಿ ವಿಶೇಷವಾಗಿ ವಾಹನ ವಿನ್ಯಾಸ ಮಾಡಿಸಿದ್ದಾರೆ. ಬಸ್‌ನ ಒಂದು ಭಾಗದಲ್ಲಿ ಹನುಮಂತನಿಗೆ ಬೇಕಾದ ಮೇವು, ನೀರು, ಮತ್ತೊಂದು ಭಾಗದಲ್ಲಿ ಮೆತ್ತನೆಯ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. 6 ಜನರ ತಂಡ ಹನುಮಂತನ ಜತೆಗೆ ತೀರ್ಥಯಾತ್ರೆ ಸಜ್ಜಾಗಿದ್ದಾರೆ. ಸೆ.20 ರಂದು ಪ್ರಯಾಣ ಆರಂಭಿಸಿದ್ದು ಸುಮಾರು 18 ದಿನ ಪ್ರಯಾಣದ ಮೂಲಕ ಆಯೋಧ್ಯೆ ಸೇರುವ ಗುರಿ ಹೊಂದಲಾಗಿದೆ.
ನೇಪಾಳಕ್ಕೂ ಭೇಟಿ: ಮೊದಲಿಗೆ ಮಂತ್ರಾಲಯದ ರಾಯರ ದರ್ಶನ ಮಾಡಿ ತೀರ್ಥಯಾತ್ರೆ ಪ್ರಾರಂಭವಾಗಿದೆ. ಆ ನಂತರ ಅಯೋಧ್ಯೆಯಲ್ಲಿ ಬಾಲರಾಮನ ದರ್ಶನ ಮಾಡಿಕೊಂಡು, ಗಂಗಾನದಿಯಲ್ಲಿ ಸ್ನಾನ ಮಾಡಿಸಿ, ಮುಂದೆ ಕಾಶಿ, ಗಯಾ ಹಾಗೂ ನೇಪಾಳದ ಸಾಲಿಗ್ರಾಮಕ್ಕೆ ಭೇಟಿ ನೀಡುವ ಇರಾದೆ ಇದೆ ಎಂದು ಪೆರಮಗೊಂಡನಹಳ್ಳಿಯ ವಾಸುದೇವಾಚಾರ್ ತಿಳಿಸಿದ್ದಾರೆ.
ಬಸವನಿಗೆ ತರಬೇತಿ: ಅಯೋಧ್ಯೆಯ ಬಾಲರಾಮನ ದರ್ಶನಕ್ಕೆ ಸಾವಿರಾರು ಕಿ.ಮೀ ಕ್ರಮಿಸಬೇಕಿರುವುದರಿಂದ ಇದಕ್ಕಾಗಿಯೇ ಒಂದೂವರೆ ವರ್ಷದಿಂದ ಹನುಮಂತನಿಗೆ ವಾಹನದ ಪ್ರಯಾಣದ ಅನುಭವ ಮಾಡಿಸಲಾಗಿದೆ. ಇದಕ್ಕೂ ಮೊದಲು ಶಾಲಾ ವಾಹನಗಳಲ್ಲಿ ನೆರೆಯ ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳಿಗೆ ಹನುಮಂತನನ್ನು ಕರೆದೊಯ್ದು ಅಭ್ಯಾಸ ಮಾಡಿಸಲಾಗಿದೆ.