

ಕೊಪ್ಪಳ: ಶ್ರಾವಣ ಮಾಸ ಹುಣ್ಣಿಮೆ ಅಂಗವಾಗಿ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಾಲಯಕ್ಕೆ ಗುರುವಾರ ಸಹಸ್ರಾರು ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು.
ವಾರದ ದಿನ ಹಾಗೂ ಹುಣ್ಣಿಮೆಯಂದು ಸಹಜಕ್ಕಿಂತ ಹೆಚ್ಚಿನ ಭಕ್ತರು ಆಗಮಿಸುವುದು ವಾಡಿಕೆ. ಶ್ರಾವಣ ಮಾಸವಾಗಿದ್ದರಿಂದ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಬೆಳಗ್ಗೆಯಿಂದಲೇ ದೇವಾಲಯ ಆವರಣ ಭಕ್ತರಿಂದ ಗಿಜುಗುಡುವುದು ಕಂಡುಬಂತು. ಸರತಿಯಲ್ಲಿ ನಿಂತು ಅಮ್ಮನ ದರ್ಶನ ಪಡೆದರು. ದೇವಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಅರ್ಚನೆ ಮಾಡಲಾಯಿತು.
ಸಾರಿಗೆ ಸಂಸ್ಥೆಯಿಂದಲೂ ಗಂಗಾವತಿ, ಹೊಸಪೇಟೆ, ಕೊಪ್ಪಳದಿಂದ ಹೆಚ್ಚುವರಿ ಬಸ್ ಬಿಡುವ ಮೂಲಕ ಭಕ್ತರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಜನರು ಹಾಗೂ ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ನಿಯಂತ್ರಿಸಿದರು. ಬಹುತೇಕ ಜನರು ದರ್ಶನ ಪಡೆಯದೇ ಹೊರಗಿನಿಂದಲೇ ನಮಿಸಿ ತೆರಳಿದರು. ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.