ಅಮ್ಮತ್ತೀರ ಕ್ರಿಕೆಟ್ ನಮ್ಮೆಗೆ ಸಂಭ್ರಮದ ಚಾಲನೆ

29 gkp 01
Published on

ಗೋಣಿಕೊಪ್ಪ: ಅಖಿಲ ಅಮ್ಮಕೊಡವ ಸಮಾಜ ಮತ್ತು ಅಮ್ಮತ್ತೀರ ಕುಟುಂಬ ಸಹಯೋಗದಲ್ಲಿ ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಅಮ್ಮತ್ತೀರ ಕ್ರಿಕೆಟ್ ನಮ್ಮೆಗೆ ಶನಿವಾರ ಸಂಭ್ರಮದ ಚಾಲನೆ ನೀಡಲಾಯಿತು.

ಮೆರವಣಿಗೆ, ಪಂಜಿನ ಓಟ, ಉಮ್ಮತ್ತಾಟ್, ನೃತ್ಯ, ದುಡಿಕೊಟ್ಟ್ ಪಾಟ್ ಮೂಲಕ ಸಾಂಸ್ಕೃತಿಕ ಮೆರುಗು ನೀಡಲಾಯಿತು.
ನಮ್ಮೆಯಲ್ಲಿ ಪಾಲ್ಗೊಂಡಿರುವ 24 ಕುಟುಂಬದ ಸದಸ್ಯರು ಒಟ್ಟಾಗಿ ಕುಟುಂಬದ ಧ್ವಜ ಹಿಡಿದು ಮೈದಾನದಲ್ಲಿ ಮೆರವಣಿಗೆ ನಡೆಸಿದರು. ಅಮ್ಮತ್ತೀರ ಕುಟುಂಬದ ಮಹಿಳೆಯರು ಹಸಿರು ಸೀರೆ ತೊಟ್ಟು ತಳಿಯತಕ್ಕಿ ಬೊಳ್ಚದೊಂದಿಗೆ ಹೆಜ್ಜೆ ಹಾಕಿದರು. ನಾಳಿಯಮಂಡ ಉಮೇಶ್ ಕೇಚಮಯ್ಯ, ನಾಳಿಯಮ್ಮಂಡ ಅಚ್ಚಮಯ್ಯ, ನಾಳಿಯಮ್ಮಂಡ ಸುರೇಶ್, ಅಣ್ಣೀರ ವಿವೇಕ್ ದುಡಿಕೊಟ್ಟ್ ಪಾಟ್ ಕಾರ್ಯಕ್ರಮ ನಡೆಸಿಕೊಟ್ಟರು. ಕುಟುಂಬದ ಮಹಿಳೆಯರು ಪ್ರಾರ್ಥನೆ ಸಲ್ಲಿಸಿದರು. ಕಾವೇರಿ ಸಂಘದ ಮಹಿಳೆಯರು ಉಮ್ಮತ್ತಾಟ್ ಪ್ರದರ್ಶನ ನೀಡಿದರು. ಹೆಮ್ಮಚ್ಚಿಮನೆ ಲಹರಿ ನೃತ್ಯ ಮಾಡಿದರು. ಮಕ್ಕಳು ಸ್ವಾಗತ ನೃತ್ಯ ನಡೆಸಿಕೊಟ್ಟರು.


ಉದ್ಘಾಟನೆ: ಕರ್ನಾಟಕ ಹಾಕಿ ತಂಡದ ಮಾಜಿ ಆಟಗಾರ ಅಮ್ಮತ್ತೀರ ಕವಿನ್ ಕೃಷ್ಣಕುಮಾರ್ ಬ್ಯಾಟ್ ಮಾಡುವ ಮೂಲಕ ಅಮ್ಮತ್ತೀರ ಕ್ರಿಕೆಟ್ ನಮ್ಮೆ ಉದ್ಘಾಟಿಸಿ ಮಾತನಾಡಿ, ಕೊಡಗಿನ ಮಣ್ಣಿನಲ್ಲಿ ಸಾಕಷ್ಟು ಹಾಕಿ ಆಟಗಾರರು ಅಂತಾರಾಷ್ಟ್ರೀಯ ಮಟ್ಟದವರೆಗೂ ಬೆಳೆದಿದ್ದಾರೆ. ಅಮ್ಮಕೊಡವ ಜನಾಂಗದಲ್ಲಿ ಕೂಡ ಅಂತಾರಾಷ್ಟ್ರೀಯ ಹಾಕಿ ಆಟಗಾರರನ್ನು ಕಾಣಬಹುದಾಗಿದೆ. ಹಾಕಿಯಲ್ಲಿ ಪ್ರತಿನಿಧಿಸಲು ಪಾಲಕರು ಉತ್ಸಾಹ ತೋರಬೇಕಿದೆ. ಮಕ್ಕಳ ಕ್ರೀಡಾ ಪ್ರತಿಭೆ ಅರಿತು ಮುನ್ನಡೆಸುವುದು ಪಾಲಕರ ಜವಾಬ್ದಾರಿಯಾಗಿದೆ ಎಂದರು.


ಅಮ್ಮಕೊಡವ ನಮ್ಮೆಯಲ್ಲಿ ಕಡ್ಡಾಯವಾಗಿ ಹಾಕಿ ಕ್ರೀಡೆ ಸೇರುವಂತಾಗಬೇಕು. ಆಗ ಪ್ರತಿಭೆಗೆ ಪ್ರೋತ್ಸಾಹ ದೊರೆಯಲಿದೆ. ಜನಾಂಗದಲ್ಲಿ ಒಗ್ಗಟ್ಟು ಮೂಡಲು ಕುಟುಂಬದಲ್ಲಿ ಒಮ್ಮತದ ಅವಶ್ಯಕತೆ ಬೇಕಿದೆ. ಸಣ್ಣ ಸಣ್ಣ ವಿಚಾರಗಳಿಂದ ಸಂಬಂಧ ಕಳೆದುಕೊಳ್ಳದಂತೆ ಎಚ್ಚರ ವಹಿಸುವುದರಿಂದ ಸಮಾಜದಲ್ಲಿ ಸುಭದ್ರತೆ ಕಾಪಾಡಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ಮಕ್ಕಳು ತಮ್ಮ ಪಾಲಕರನ್ನು ಚೆನ್ನಾಗಿ ಸಾಕುತ್ತಿದ್ದರು. ಇಂತಹ ಜವಾಬ್ದಾರಿ ಈಗಲೂ ಮುಂದುವರಿಯಬೇಕು ಎಂದು ಸಲಹೆ ನೀಡಿದರು.
ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಎನ್.ಪ್ರತ್ಯು ಮಾತನಾಡಿ, ಅಮ್ಮತ್ತೀರ ಕುಟುಂಬದಲ್ಲಿ ಹೆಚ್ಚು ಸಾಧಕರಿದ್ದು, ಸಮುದಾಯದವರು ಪಾಲ್ಗೊಳ್ಳುವಿಕೆಗೆ ಮನಸ್ಸು ಮಾಡಬೇಕಿದೆ. ಅಮ್ಮಕೊಡವ ಮಕ್ಕಳು ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯಲು ಪಾಲಕರು ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಇದರಿಂದ ಕ್ರಿಡಾಪಟುಗಳನ್ನು ದೇಶಕ್ಕೆ ಅರ್ಪಿಸಲು ಸಹಾಯವಾಗಲಿದೆ ಎಂದರು.


ಅಮ್ಮತ್ತೀರ ಕ್ರಿಕೆಟ್ ಕಪ್ ಅಧ್ಯಕ್ಷ ಅಮ್ಮತ್ತೀರ ಆರ್. ಪ್ರಸಾದ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಮ್ಮಕೊಡವರು ಎಲ್ಲ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದು ಮೆಚ್ಚುವಂತಹ ವಿಚಾರ ಎಂದರು.
ಅಖಿಲ ಅಮ್ಮಕೊಡವ ಸಮಾಜದ ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ಅಮ್ಮತ್ತೀರ ಕುಟುಂಬದ ಪ್ರಮುಖರಾದ ಎ. ಕೆ. ಅಶೋಕ್, ಎ.ಎ.ರುಕ್ಮಿಣಿ, ಎ.ವಿ. ಸರಸ್ವತಿ, ಎ.ಕೆ. ಯಮುನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net