ಅಮೆರಿಕದಿಂದ ಕನ್ನಡದಲ್ಲಿ ಯುಗಾದಿ ಗೀತೆ

mysore
Published on

ಮೈಸೂರು: ಯುಗಾದಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ದೂರದ ಅಮೆರಿಕದಿಂದ ಕನ್ನಡ ಯುಗಾದಿ ಗೀತೆ ತೇಲಿ ಬಂದಿದೆ. ಯುಗಾದಿ ಹಾಡಿನ ನೃತ್ಯದಲ್ಲಿ ಹಬ್ಬದ ಹಿರಿಮೆ ಮತ್ತು ಕನ್ನಡದ ಶ್ರೀಮಂತ ಸಂಸ್ಕೃತಿ ಪರಿಚಯ ಇದೆ.

ಮೂಲತಃ ಮೈಸೂರಿನವರಾದ ಅಮೆರಿಕದ ಪೋರ್ಟ್‌ಲ್ಯಾಂಡ್‌ನಲ್ಲಿ ನೆಲೆಸಿರುವ ಪ್ರೀತಿ ರಾವ್ ಮತ್ತವರ ಐವರು ಸ್ನೇಹಿತೆಯರು ಸೇರಿ ಕನ್ನಡ ಯುಗಾದಿ ಗೀತೆಗೆ ನೃತ್ಯ ಸಂಯೋಜಿಸಿದ್ದಾರೆ.

ನೋವು ನಲಿವು ಏನೇ ಬರಲಿ ಸಾಗುವೆವು ನಾವು, ಹೊಸತನವನು ಹೊಸ ವರುಷ ಬರ ಮಾಡಿಕೊಂಡು... ಸಾಲುಗಳಲ್ಲಿ ಬದುಕಿನ ಸಮರಸದ ತಾತ್ವಿಕತೆ ಇದೆ. ಗಾನ ನೃತ್ಯ ಕಲಾಜ್ಞಾನ ನಮ್ಮ ನಾಡ ಸಂಸ್ಕೃತಿ... ಸಾಲುಗಳಲ್ಲಿ ಕನ್ನಡದ ಹೆಮ್ಮೆ ಅನುರಣಿಸಿದೆ. ನೃತ್ಯದಲ್ಲಿ ಹಬ್ಬದ ಸಂಭ್ರಮ ಅನಾವರಣಗೊಂಡಿದೆ.

ಗಾಯಕಿ ಪ್ರೀತಿ ರಾವ್ ಅವರು ಕಳೆದ ವರ್ಷ ಗುಜರಾತಿನ ಪ್ರಸಿದ್ಧ ನವರಾತ್ರಿಯ ಗರ್ಭಾ ನೃತ್ಯಕ್ಕೆ ಹಾಡು ರಚಿಸಿ ನರ್ತಿಸಿ ವಿಡಿಯೋ ಮಾಡಿದ್ದರು. ಆ ವಿಡಿಯೋ ಗಮನ ಸೆಳೆದಿದತ್ತು. ಕನ್ನಡದ ಹಾಡುಗಳಿಗೆ ನೃತ್ಯ ಸಂಯೋಜಿಸುವಂತೆ ಪ್ರೀತಿಯ ಒತ್ತಾಯದ ಫಲವೇ ಯುಗಾದಿ ಕನ್ನಡ ಗೀತೆ ರೂಪುಗೊಂಡಿದೆ. ಯೂಟ್ಯೂಬ್‌ನಲ್ಲಿ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಮೋದ್ ಅರವಿಂದ್ ರಚನೆಯ ಯುಗಾದಿ ಕನ್ನಡ ಗೀತೆಗೆ ಮುಂಬೈನ ನವೀನ್ ಶರ್ಮ ಸಂಗೀತ ಸಂಯೋಜಿಸಿದ್ದಾರೆ. ಪವಿತ್ರ ಪ್ರಸಾದ್ ನೃತ್ಯ ಸಂಯೋಜಿಸಿದ್ದಾರೆ. ರಶ್ಮಿ ಮುದಿಯಾನೂರು ಸಹ ಗಾಯಕಿಯಾಗಿ ಹಾಡಿದ್ದಾರೆ. ಸಿನಿಮೊಟೋಗ್ರಫಿ, ಎಡಿಟಿಂಗ್ ವಿವಿಡ್ ಫಿಕ್ಸೆಲ್ ಮ್ಯಾಜಿಕ್, ವಿನಯ್ ಹಡಗಲಿ ಮತ್ತು ಬಸವಣ್ಣ ಬಾವಿದಟ್ಟಿ, ಗಾಯನ ಮತ್ತು ನಿರ್ದೇಶನ ಪ್ರೀತಿ ರಾವ್. ಮಕ್ಕಳಾದ ಅಭಿಜ್ಞ ವಶಿಷ್ಠ, ದಿಯಾ ರಾವ್, ಸಾನ್ವಿ ಶ್ರೀತಿ, ಶ್ರೇಯಾಸ್ ಸಂತೋಷ್, ವಿಹಾನ್ ಹಡಗಲಿ, ಮಹಿಳೆಯರಾದ ಅನುಪಮಾ ಮುರಳೀಧರ್, ಸ್ವಾತಿರಾವ್, ತೃಪ್ತಿ ಪಾಟೀಲ್, ವೀಣಾ ಹಡಗಲಿ ನೃತ್ಯ ಮಾಡಿದ್ದಾರೆ.

ಪ್ರೀತಿ ರಾವ್ ಅವರು ಮೈಸೂರಿನ ಮರಿಮಲ್ಲಪ್ಪ ಶಾಲೆ, ಎನ್‌ಐಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಅಮೆರಿಕದ ಪರಡಿಯೂ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಪೂರ್ಣಗೊಳಿಸಿ ಇಂಟೆಲ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಫೋರ್ಟ್‌ಲ್ಯಾಂಡ್‌ನಲ್ಲಿ ನೆಲೆಸಿದ್ದಾರೆ.

ಬಾಲ್ಯದಲ್ಲಿ ಶಾಸ್ತ್ರೀಯ ಸಂಗೀತ ಕಲಿತಿದ್ದ ಪ್ರೀತಿರಾವ್ ಅವರು ಮೈಸೂರು ಆಕಾಶವಾಣಿಯಲ್ಲಿ ಹಾಡಿದ್ದಾರೆ. ಅಮೆರಿಕದಲ್ಲಿ ಕನ್ನಡ ಸಂಘಟನೆಗಳು ನಡೆಸುವ ಸಮಾರಂಭಗಳಲ್ಲಿ ಹಾಡುತ್ತ ಸಂಗೀತಯಾನ ಮುಂದುವರಿಸಿದ್ದಾರೆ.

ಯುಗಾದಿ ಕನ್ನಡ ಗೀತೆ ವಿಡಿಯೋ ನೋಡಲು: https://youtu.be/LBdT7bFbPcU?si=UNCVt8XxmQqcpwF_

-----------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net