ಅಮೃತ್ ನಗರೋತ್ಥಾನದಲ್ಲಿ ಅಭಿವೃದ್ಧಿ

Kdr park
ಕಡೂರು 9ನೇ ವಾಡ್‌ನಲ್ಲಿ ಉದ್ಯಾನ ನಿರ್ಮಾಣಕ್ಕೆ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಮಂಜುಳಾ, ಯಾಸಿನ್, ಸುಧಾ, ಚಿನ್ನರಾಜ್, ಮರುಗುದ್ದಿ ಮನು, ಶಂಕರ್ ಇತರರಿದ್ದರು.
Published on

ಕಡೂರು: ಪಟ್ಟಣದ ಐದು ಭಾಗಗಳಲ್ಲಿನ ಉದ್ಯಾನ, ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ಗ್ರಂಥಾಲಯಗಳ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಲಕ್ಷ್ಮೀಶ ನಗರದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ-4ರ ಯೋಜನೆಯಡಿ ಉದ್ಯಾನ ನಿರ್ಮಿಸಲು ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

2023-24ನೇ ಸಾಲಿನ ಅಮೃತ್ ನಗರ ಯೋಜನೆಯಡಿ ಬಿಡುಗಡೆಯಾಗಿದ್ದ ಅನುದಾನದಲ್ಲಿ ಕಾಮಗಾರಿಗಳು ನಡೆದು ಉಳಿದ 95.15 ಲಕ್ಷ ರೂ. ಅನುದಾನದಲ್ಲಿ ಲಕ್ಷ್ಮೀಶ ನಗರ, ವೆಂಕಟೇಶ್ವರ ನಗರ, ಸಾಲಮ್ಮ ಕಾಲನಿ, ವೇದಾನಗರ, ಸ್ವರ್ಣಾಂಭ ಕಾಲನಿಗಳ ಭಾಗದಲ್ಲಿ ಉದ್ಯಾನಗಳ ಅಭಿವೃದ್ಧಿ ಮತ್ತು ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಲಕ್ಷ್ಮೀಶ ನಗರದ ಸಾರ್ವಜನಿಕರ ಬಹುವರ್ಷಗಳ ಬೇಡಿಕೆಯಾಗಿದ್ದು, ಈ ಉದ್ಯಾನದಲ್ಲಿ ನಾಗರಿಕರ ಉಪಯೋಗಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಪಟ್ಟಣವನ್ನು ನಿತ್ಯ ಸ್ವಚ್ಛಗೊಳಿಸುವ ಪೌರಕಾರ್ಮಿಕರು ದಣಿವಾದಾಗ ವಿಶ್ರಾಂತಿ ಪಡೆಯಲು ಮೊದಲ ಬಾರಿಗೆ ಕೊಠಡಿ ನಿರ್ಮಿಸಲು ಆಡಳಿತ ಮುಂದಾಗಿದ್ದು ಪೌರಕಾರ್ಮಿಕರ ಬೇಡಿಕೆ ಈಡೇರಿಸಲಾಗುವುದು. ವೆಂಕಟೇಶ್ವರ ನಗರ ಮತ್ತು ಗಣಪತಿ ಪೆಂಡಾಲ್ ಸಮೀಪದ ಎರಡು ಗ್ರಂಥಾಲಯಗಳನ್ನು ನಿರ್ಮಿಸಲಾಗುವುದು. ಲಕ್ಷ್ಮೀಶ ನಗರದ ಪ್ರಮುಖ 3 ರಸ್ತೆಗಳು ಹಾಳಾಗಿದ್ದು ನಿವಾಸಿಗರ ಬೇಡಿಕೆ ಹೆಚ್ಚಿದ್ದು ಮುಂಬರುವ ದಿನಗಳಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶಾಸಕರೊಂದಿಗೆ ಚರ್ಚಿಸಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು, ಬೀರೂರು-ಕಡೂರು ಪುರಸಭೆಗೆ ತಲಾ 5 ಕೋಟಿ ರೂ. ನೀಡುವುದಾಗಿ ಶಾಸಕ ಕೆ.ಎಸ್.ಆನಂದ್ ಭರವಸೆ ನೀಡಿದ್ದಾರೆ. ಅನುದಾನ ಮಂಜೂರಾದ ಬಳಿಕ ಮತ್ತಷ್ಟು ಅಭಿವೃದ್ಧಿಗೆ ವೇಗ ದೊರಕಿಸಿಕೊಡಲಾಗುವುದು ಎಂದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ವಿಜಯ ಚಿನ್ನರಾಜ್, ಮರುಗುದ್ದಿ ಮನು, ಸುಧಾ ಉಮೇಶ್, ಯಾಸಿನ್, ಮೋಹನ್, ಸುಬ್ಬಣ್ಣ, ಶಂಕರ್, ಚಿನ್ನರಾಜ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ದೊಣ್ಣೆಕೋರನಹಳ್ಳಿ ಉಮೇಶ್, ಜಿಮ್ ರಾಜ್, ಮುಖ್ಯಾಧಿಕಾರಿ ಮಂಜುನಾಥ್, ಇಂಜಿನಿಯರ್ ಜಗದೀಶ್, ತಿಮ್ಮಯ್ಯ, ಗುತ್ತಿಗೆದಾರ ಅವಿನಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net