

ಸಂತೋಷ ವೈದ್ಯ ಹುಬ್ಬಳ್ಳಿ
ಸ್ಮಾರ್ಟ್ ಸಿಟಿ ಯೋಜನೆಯಡಿ ರೂಪಿಸಲಾದ ನಗರದ ಜನತಾ ಬಜಾರ್, ಹೊಸ ದುರ್ಗದಬೈಲ್ ಎಂ.ಜಿ. ಮಾರ್ಕೆಟ್ ಹಾಗೂ ಹಳೇ ಹುಬ್ಬಳ್ಳಿ ಮಾರುಕಟ್ಟೆ ನವೀಕರಣದ ಸ್ವರೂಪ ಬದಲಾವಣೆ ಕುರಿತು ಅಧ್ಯಯನ ನಡೆಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿಯೋಗ ಜ. 20ರಂದು ಅಮೃತಸರ(ಪಂಜಾಬ್)ಕ್ಕೆ ತೆರಳಲಿದೆ.
ಈಗಾಗಲೇ ರೂಪಿಸಿರುವ ಬಹುಮಹಡಿ ಕಟ್ಟಡ ನಿರ್ಮಾಣ ನಕ್ಷೆಯನ್ನು ಕೈ ಬಿಡಲಾಗಿದೆ. ವ್ಯಾಪಾರಿಗಳಿಗೆ ನೆಲ ಮಹಡಿಯಲ್ಲೇ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ. ಅಮೃತಸರದಲ್ಲಿ ಇದೇ ಮಾದರಿಯಲ್ಲಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲಾಗಿದೆಯಂತೆ.
ಶಾಸಕ ಪ್ರಸಾದ ಅಬ್ಬಯ್ಯ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ನ ಎಂಡಿ ಶಕೀಲ್ ಅಹ್ಮದ್, ಮುಖ್ಯ ಇಂಜಿನಿಯರ್ ಎಂ. ನಾರಾಯಣ, ವಿಶೇಷಾಧಿಕಾರಿ ಎಸ್.ಎಚ್. ನರೇಗಲ್, ಯೋಜನಾ ನಿರ್ವಹಣಾ ಸಲಹಾ ಸಂಸ್ಥೆ ಪ್ರೖೆಸ್ ವಾಟರ್ಹೌಸ್ ಕೂಪರ್ಸ್ ಪ್ರೖೆವೇಟ್ ಲಿಮಿಟೆಡ್ನ ಆರ್ಕಿಟೆಕ್ಚರ್, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಬದಲು ಅವರ ಪ್ರತಿನಿಧಿ ನಿಯೋಗದಲ್ಲಿದ್ದಾರೆ.
ಜನತಾ ಬಜಾರ್, ದುರ್ಗದಬೈಲ್ ಹಾಗೂ ಹಳೇ ಹುಬ್ಬಳ್ಳಿಯಲ್ಲಿ ಹಾಲಿ ಇರುವ ಮಾರುಕಟ್ಟೆ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಬಹುಮಹಡಿ ಮಾರುಕಟ್ಟೆ ಸಂಕೀರ್ಣ ನಿರ್ವಣಕ್ಕೆ ಮೊದಲಿನಿಂದಲೂ ಅಲ್ಲಿರುವ ಅಂಗಡಿಕಾರರ ವಿರೋಧವಿತ್ತು. ನಿತ್ಯದ ವ್ಯಾಪಾರ ನಂಬಿಕೊಂಡಿರುವ ವ್ಯಾಪಾರಿಗಳದ್ದು ಹಾಲಿ ಇರುವಂತೆಯೇ ಇರುತ್ತೇವೆ ಎಂಬ ಧೋರಣೆ. ವ್ಯಾಪಾರಿ ಕಟ್ಟೆ ನವೀಕರಿಸಿದರೆ ಸಾಕು, ಬಹುಮಹಡಿ ಕಟ್ಟಡ ಬೇಡ ಎಂದು ಆಗ್ರಹಿಸಿದ್ದರು. ಆದರೆ, ಇದ್ಯಾವುದನ್ನು ಲೆಕ್ಕಿಸದೇ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಬಹುಮಹಡಿ ಕಟ್ಟಡದ ನಕ್ಷೆಯನ್ನು ರೂಪಿಸಿತ್ತು. ಅದರಂತೆ ಮುಂದಡಿ ಇಡಲಾಗಿತ್ತು. ಅಂಗಡಿಕಾರರೊಂದಿಗೆ ಸಮಾಲೋಚನೆ ಸಹ ನಡೆಸಲಾಗಿತ್ತು.
‘ಹಣ್ಣು, ಕಾಯಿಪಲ್ಲೆ, ಹೂವು, ಮೊಟ್ಟೆ, ಇತ್ಯಾದಿ ದಿನಬಳಕೆ ವಸ್ತುಗಳ ಮಾರಾಟಕ್ಕೆ ಬಹುಮಹಡಿ ಕಟ್ಟಡ ಸೂಕ್ತವಲ್ಲ. ಇಂಥ ವ್ಯಾಪಾರಿಗಳು ಮೊದಲ ಮಹಡಿಯನ್ನು ಬಿಟ್ಟು 2ನೇ ಮಹಡಿಗೆ ಹೋಗಲು ಇಷ್ಟ ಪಡುವುದಿಲ್ಲ. 2ನೇ ಮಹಡಿಗೆ ಹೋಗುವ ಮೆಟ್ಟಿಲುಗಳ ಮೇಲೆ ವ್ಯಾಪಾರಕ್ಕೆ ಕುಳಿತು ಬಿಡುತ್ತಾರೆ’ ಎಂದು ಇತ್ತೀಚೆಗೆ ನಡೆದ ಹು-ಧಾ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ ಗುಪ್ತಾ ಅಭಿಪ್ರಾಯಿಸಿದ್ದರು. ಅವರ ಸಲಹೆ ಮೇರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿಯೋಗ ಅಮೃತಸರಕ್ಕೆ ತೆರಳುತ್ತಿದೆ. ಗೌರವ ಗುಪ್ತಾ ಅವರು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ನ ಚೇರ್ಮನ್ ಸಹ ಆಗಿದ್ದಾರೆ. ಅಮೃತಸರ ಮಾರುಕಟ್ಟೆ ಪ್ರದೇಶವನ್ನು ಗೌರವ ಗುಪ್ತಾ ನೋಡಿದ್ದಾರಂತೆ. ಜನತಾ ಬಜಾರ್ 18.35 ಕೋ., ಎಂ.ಜಿ. ಮಾರುಕಟ್ಟೆ 65 ಕೋ. ರೂ. ಹಾಗೂ ಹಳೇ ಹುಬ್ಬಳ್ಳಿ ಮಾರುಕಟ್ಟೆಯನ್ನು 13.96 ಕೋ. ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಜನತಾ ಬಜಾರ್ನಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣ ನಿರ್ವಣಕ್ಕೆ ಟೆಂಡರ್ ಕರೆದು ಗುತ್ತಿಗೆದಾರರನ್ನು ಗೊತ್ತು ಪಡಿಸಲಾಗಿತ್ತು. ಸ್ಥಳಾಂತರಗೊಳ್ಳುವ ಅಂಗಡಿಕಾರರಿಗೆ ಪುನರ್ವಸತಿ ಕಲ್ಪಿಸಲು ಈಜುಗೊಳ ಸಮೀಪ (ಟ್ರಾಫಿಕ್ ಐಲ್ಯಾಂಡ್ ಬಳಿ) ಹಳ್ಳೂರ ಕುಟುಂಬದವರಿಗೆ ಸೇರಿದ 1 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಉಳಿದ ಕಡೆ ಅಂಗಡಿಕಾರರ ಪುನರ್ವಸತಿ ಬಗ್ಗೆ ನಿರ್ಧಾರ ಆಗಿರಲಿಲ್ಲ.
ಅಮೃತಸರದಲ್ಲಿ ಮಾರುಕಟ್ಟೆ ಪ್ರದೇಶ ಯಾವ ರೀತಿ ಅಭಿವೃದ್ಧಿ ಪಡಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿಯೋಗ ತೆರಳಲು ನಿರ್ಧರಿಸಲಾಗಿದೆ. ಜ. 19ರಂದು ವಿಮಾನದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ತಲುಪಿ ಅಲ್ಲಿಂದ ಅಮೃತಸರಕ್ಕೆ ಪ್ರಯಾಣಿಸಲಿದ್ದೇವೆ. 20ರಂದು ಅಮೃತಸರ ನಗರದ ಮಾರುಕಟ್ಟೆ ಪ್ರದೇಶ ವೀಕ್ಷಿಸಲಿದ್ದೇವೆ. | ಎಸ್.ಎಚ್. ನರೇಗಲ್ ವಿಶೇಷಾಧಿಕಾರಿ, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್