ಅಮೃತ ಮಹೋತ್ಸವ ಅರ್ಥಪೂರ್ಣ ಆಚರಣೆಗೆ ನಿರ್ಧಾರ

28srt-2
ಶಿರಹಟ್ಟಿ ಫಕೀರೇಶ್ವರ ಮಠದ 13ನೇ ಪೀಠಾಧಿಪತಿ ಶ್ರೀ ಫಕೀರಸಿದ್ಧರಾಮ ಸ್ವಾಮಿಗಳ ಅಮೃತ ಮಹೋತ್ಸವ ಆಚರಿಸುವ ಕುರಿತು ಶ್ರೀಮಠದಲ್ಲಿ ಮಂಗಳವಾರ ಕರೆಯಲಾಗಿದ್ದ ಭಕ್ತರ ಸಭೆಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ‘ನಿವೇದನೆ ಕೈಪಿಡಿ’ ಬಿಡುಗಡೆ ಮಾಡಿದರು. ಶ್ರೀ ಫಕೀರಸಿದ್ಧರಾಮ ಸ್ವಾಮೀಜಿ, ಫಕೀರದಿಂಗಾಲೇಶ್ವರ ಶ್ರೀಗಳು, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ರಾಮಣ್ಣ ಲಮಾಣಿ ಇತರರು ಇದ್ದರು.
Published on

ಶಿರಹಟ್ಟಿ: ಫಕೀರೇಶ್ವರ ಮಠದ ಪೀಠಾಧಿಪತಿ ಶ್ರೀ ಫಕೀರಸಿದ್ಧರಾಮ ಶ್ರೀಗಳವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀಮಠದ ಉತ್ತರಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

2024ರ ಫೆಬ್ರವರಿಯಲ್ಲಿ ನಡೆಯಲಿರುವ ಫಕೀರಸಿದ್ಧರಾಮ ಶ್ರೀಗಳವರ ಅಮೃತ ಮಹೋತ್ಸವ ಆಚರಣೆ ಕುರಿತು ರ್ಚಚಿಸಲು ಶ್ರೀಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಶ್ರೀಗಳು, ‘ಕಾರ್ಯಕ್ರಮದ ಸ್ಮರಣಾರ್ಥ ಪ್ರತಿ ಗ್ರಾಮದಲ್ಲಿ ಫಕೀರೇಶ್ವರ ಭಾವೈಕ್ಯ ಬಳಗ ಸ್ಥಾಪಿಸುವುದು, ವಿಜಯಪುರ ಜಿಲ್ಲೆ ಬಂಡೆಪ್ಪನಹಳ್ಳಿಯಿಂದ ಶಿರಹಟ್ಟಿವರೆಗೆ 1008 ಯುವಕರ ಬೈಕ್ ರ್ಯಾಲಿ, ಬೃಹತ್ ಭಾವೈಕ್ಯತಾ ಜ್ಯೋತಿ ರಥಯಾತ್ರೆ, ಫಕೀರದಿಂಗಾಲೇಶ್ವರ ಶ್ರೀಗಳಿಂದ 75 ದಿನ ಪ್ರವಚನ, ವಿವಿಧ ಭಾಷೆಯ 75 ಗ್ರಂಥಗಳ ಲೋಕಾರ್ಪಣೆ, ನೂತನವಾಗಿ ಜೀಣೋದ್ಧಾರಗೊಂಡ ಶಾಖಾ ಮಠಗಳ ಉದ್ಘಾಟನೆ, ಗೋಪುರಗಳಿಗೆ ಕಳಸಾರೋಹಣ, ಮುತ್ತಿನ ಪಲ್ಲಕ್ಕಿ ಉತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮ, ಪೀಠಾಧಿಪತಿ ಶ್ರೀಗಳ ಬಂಗಾರದ ತುಲಾಭಾರ ನೆರವೇರಿಸುವುದರ ಜತೆಗೆ ಚಿನ್ನದ ಕಿರೀಟಧಾರಣೆ, ಸೇವೆ ಸಲ್ಲಿಸಿದ ಮಹಾದಾನಿಗಳಿಗೆ ಶ್ರೀರಕ್ಷೆ ಮತ್ತು ಮಹಿಳಾ, ರೈತ ಗೋಷ್ಠಿಗಳು ನಡೆಯಲಿವೆ’ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ‘ಸರ್ವಧಮಗಳ ಸಮನ್ವಯದ ಶ್ರದ್ಧಾ ಕೇಂದ್ರವಾಗಿ ಫಕೀರೇಶ್ವರ ಮಠ ದೇಶಕ್ಕೆ ಮಾದರಿಯಾಗಿದೆ. ಶ್ರೀಮಠದ ದ್ವೇಷ ಬಿಡು, ಪ್ರೀತಿ ಮಾಡು ಎಂಬ ತತ್ವ ಸಂದೇಶ ಪಾಲನೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.

ವಿ.ಬಿ. ಹಿರೇಮಠ, ಅಂದಾನಯ್ಯ ವಿಭೂತಿಮಠ, ಶಿವಲಿಂಗಯ್ಯಸ್ವಾಮಿ ಶಿವಯೋಗಿಮಠ, ಶೇಖಣ್ಣ ಬೆಂಡಿಗೇರಿ, ಚನ್ನಪ್ಪ ವಾಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ರಾಮಣ್ಣ ಲಮಾಣಿ, ಮಹಾಂತ ಸ್ವಾಮೀಜಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಪೀಠಾಧ್ಯಕ್ಷ ಫಕೀರಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net