

ಶಿವಮೊಗ್ಗ: ರಿಯೋ ಪ್ರೊಡಕ್ಷನ್ ಹೌಸ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ಮಿಸ್ ಇಂಡಿಯಾ ಐಕಾನ್ ಸ್ಪರ್ಧೆಯಲ್ಲಿ ಶಿವಮೊಗ್ಗ ವಿನೋಬನಗರದ ಅಮೃತಾ ಪವಾರ್ ‘ಮಿಸ್ ಕರ್ನಾಟಕ’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು ಶಾಲಾ ಮತ್ತು ಕಾಲೇಜು ದಿನಗಳಿಂದಲೂ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಪಡೆಯುತ್ತಿದ್ದೆ. ಸ್ಥಳೀಯ, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಅನೇಕ ಪ್ರಶಸ್ತಿಗಳು ನನಗೆ ಲಭಿಸಿವೆ. ಮಾಡೆಲಿಂಗ್ ನನ್ನ ಹವ್ಯಾಸ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮಾ.1ರಂದು ಅಂತಿಮ ಸ್ಪರ್ಧೆ ನಡೆದಿತ್ತು. ಪರಿಶ್ರಮ, ಒಂದಿಷ್ಟು ಸಾಧನೆ, ಸ್ಪೂರ್ತಿ, ಸಹಕಾರ ಎಲ್ಲವೂ ಇದ್ದರೆ ಏನಾದರೂ ಸಾಧಿಸಬಹುದೆಂಬ ಸತ್ಯವನ್ನು ನಾನು ತಿಳಿದುಕೊಂಡಿದ್ದೇನೆ. ನನ್ನ ತಂದೆ, ತಾಯಿ, ಸಹೋದರ ಈ ಸಾಧನೆಗೆ ಕಾರಣ. ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವುದು ನನ್ನ ಮುಂದಿನ ಗುರಿ ಎಂದರು. ಅಮೃತಾ ತಾಯಿ ರಶ್ಮಿ ಪವಾರ್ ಇದ್ದರು.