ಅಮೃತ ಕಲಶ ನೀಡಿದ ಪ್ರಧಾನಿ ಮೋದಿ

Yatnal
Published on

ಕಲಬುರಗಿ: ಭಯೋತ್ಪಾದಕರ ವಿರುದ್ಧ ಬಿಜೆಪಿ ಇದ್ದು, ದೇಶಕ್ಕೆ ಕಾಂಗ್ರೆಸ್ ೫೦ ವರ್ಷದಲ್ಲಿ ಖಾಲಿ ಚೊಂಬು ನೀಡಿತ್ತು. ಪ್ರಸ್ತುತ ಇಂಗ್ಲೆಡ್‌ನ್ನು ಆರನೇ ಸ್ಥಾನಕ್ಕೆ ತಳ್ಳಿ ದೇಶ ಐದನೇ ಸ್ಥಾನಕ್ಕೇರಿದೆ. ಕೇಂದ್ರ ಸರ್ಕಾರ, ಕೇಂದ್ರದ ಮಂತ್ರಿಗಳ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ ಆರೋಪ ಇದೇನಾ? ದೇಶಕ್ಕೆ ಅಮೃತ ಕಲಶ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ೧೦ ವರ್ಷದಲ್ಲಿ ಮೋದಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಹಿಂದುಗಳ ರಕ್ಷಣೆ ಆಗಬೇಕಿದೆ. ಲವ್ ಜಿಹಾದ್ ಮೂಲಕ ನೇಹಾ ಹಿರೇಮಠ ಕೊಲೆ ಆಗಿದೆ. ಆದರೆ ಕಾಂಗ್ರೆಸ್ಸಿಗರು ರೆಕ್ಕೆ ಪುಕ್ಕ ಕಟ್ಟಿ ಹೆಣ್ಣು ಮಗಳದ್ದೆ ತಪ್ಪು ಎನ್ನುವ ಹಾಗೆ ಬಿಂಬಿಸುತ್ತಿದ್ದಾರೆ. ಮುಸ್ಲಿಂ ಶಾಸಕ ಗೆದ್ದರೆ ಪಾಕಿಸ್ತಾನ ಧ್ವಜ ಹಾರಿಸುತ್ತಾರೆ. ಜೈಶ್ರೀರಾಮ ಎಂದರೆ ಘೋಷಣೆ ಕೂಗಿದರೆ ಗಲಾಟೆ ಮಾಡುತ್ತಿದ್ದಾರೆ. ಗೃಹ ಸಚಿವರು ಉಡಾಫೆಯ ಉತ್ತರ ಕೊಡುತ್ತಾರೆ ಎಂದು ಕಿಡಿ ಕಾರಿದರು.
ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಏನು ಮಾಡಿದ್ದಾರೆ ತಿಳಿಸಲಿ. ರಸ್ತೆಯಲ್ಲಿ ಸ್ಟೇಟ್ಮೆಂಟ್ ಕೊಡುವ ಮಂತ್ರಿಯಾಗಿದ್ದಾರೆ. ಮೋದಿ ಅವರ ಸಮಕ್ಕೆ ಪ್ರಿಯಾಂಕ್ ಅಲ್ಲವೇ ಅಲ್ಲ. ಪ್ರಿಯಾಂಕ್ ಖರ್ಗೆ ಮಾಧ್ಯಮದ ಮುಂದೆ ಹೇಳಿಕೆ ಕೊಡುತ್ತಿದ್ದಾರೆ. ತಾಕತ್ ಇದ್ದರೆ ಸಿಬಿಐ ಕೊಟ್ಟು ತನಿಖೆ ಮಾಡಿಸಲಿ. ಎಷ್ಟು ಕಮಿಷನ್ ಬಂದಿದೆ ತಿಳಿಸಲಿ. ಇದೀಗ ಬಿಬಿಎಂಪಿಯಲ್ಲಿ ಶೇ.೧೩ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೊತ್ವಾಲ್ ರಾಮಚಂದ್ರನಿಗೆ ಸಿಗರೇಟ್ ತಂದು ಕೊಡುವ ವ್ಯಕ್ತಿ ಬಳಿ ಎರಡು ಸಾವಿರ ಕೋಟಿ ಹೇಗೆ ಬಂತು? ಡಿಕೆಶಿ ಸಹೋದರರ ಬಳಿ ಎರಡು ಸಾವಿರ ಕೋಟಿ ಆಸ್ತಿ ಇದೆ. ನರೇಂದ್ರ ಮೋದಿ ಅವರು ಮುಖ್ಯಮಂತ್ರಿ, ಪ್ರಧಾನಿ ಆಗಿದ್ದರೂ ಎರಡು ಕೋಟಿ ಆಸ್ತಿ ಇದೆ. ಯಾರು ಯಾರಿಗೆ ಚೊಂಬು ಕೊಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net