ಅಮಿತ್ ಷಾಗೆ ಕುಮಾರಸ್ವಾಮಿ ತಿರುಗೇಟು

Kumar- Shah
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಮಿತ್ ಷಾ ಅವರು ಮೊದಲು ಸಂವಿಧಾನದ ವ್ಯವಸ್ಥೆ ತಿಳಿದುಕೊಳ್ಳಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿರುವ ಅಮಿತ್ ಷಾ ಹೇಳಿಕೆಗೆ ತಿರುಗೇಟು ನೀಡಿದರು.
ನಮ್ಮ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನದ ಪ್ರಕಾರ ಯಾರು ಯಾವುದೇ ವೃತ್ತಿಯನ್ನಾದರೂ ಆಯ್ದುಕೊಳ್ಳಬಹುದು. ಚುನಾವಣೆಗಳಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಜನರ ಆಶೀರ್ವಾದ ಇದ್ದರೆ ಜನಪ್ರತಿನಿಧಿ ಆಗುತ್ತಾರೆ. ನಾವೆಂದೂ   ಹಿಂಬಾಗಿಲದಿಂದ ಪ್ರವೇಶ ಮಾಡಿಲ್ಲ. ರಾಜಕಾರಣದಲ್ಲಿ ಹೋರಾಟದ ಮೂಲಕ ಬಂದಿದ್ದೇವೆ. ಜನ ಸ್ವೀಕಾರ ಮಾಡಿದಾಗ ಜನಪ್ರತಿನಿಧಿ ಆಗಿದ್ದೇವೆ. ಅದಕ್ಕೆ ನಾವು ಅಮಿತ್ ಷಾ ಅವರಿಂದ ಅನುಮತಿ ಪಡೆಯಬೇಕಾ? ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಅವರ ಮಗ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾನೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅವನಿಗೆ ಅಧಿಕಾರ ಕೊಟ್ಟಿದ್ದಾರೆ. ಅವರ ಸಾಧನೆ ಏನು? ಬಿಜೆಪಿಯಲ್ಲಿ ಅಪ್ಪ- ಮಕ್ಕಳು ರಾಜಕಾರಣದಲ್ಲಿ ಇಲ್ಲವೇ? ಹುಬ್ಬಳ್ಳಿ- ಧಾರವಾಡದಲ್ಲೂ ಕುಟುಂಬ ರಾಜಕಾರಣವಿದ್ದು, ಅವರಿಗೆ ಕಾಣುವುದಿಲ್ಲ. ದೇವೇಗೌಡರದ್ದು ಮಾತ್ರ ಕುಟುಂಬ ರಾಜಕಾರಣವೇ? ಇದು ಎಲ್ಲ ಪಕ್ಷಗಳಲ್ಲಿ ಸಾಮಾನ್ಯ ಎಂಬುದನ್ನು ತಿಳಿಯಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಅದಕ್ಕೆ ಅಮಿತ್ ಷಾ ಅವರಿಂದ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ. ನಾವು ಜನರ ನೋವಿಗೆ ಸ್ಪಂದಿಸಿ ರಾಜಕಾರಣ ಮಾಡುತ್ತೇವೆ. ಅವರಂತೆ ಅಮಾಯಕರ ಬಲಿ ಕೊಟ್ಟು ರಾಜಕಾರಣ ಮಾಡುವುದಿಲ್ಲ. ಅವರ ದುರಹಂಕಾರ ಏನಾಗಲಿದೆ ಎಂಬುದನ್ನು ಕಾದು ನೋಡಿ. ಕರ್ನಾಟಕ ಉತ್ತರಪ್ರದೇಶ ಅಲ್ಲ. ರಾಜ್ಯಕ್ಕೆ ಅವರ ಕೊಡುಗೆ ಏನು ಎಂಬುದನ್ನು ಹೇಳಲಿ. ಕೇಂದ್ರ, ಕರ್ನಾಟಕ, ಗೋವಾ ಸೇರಿ ತ್ರಿಬಲ್ ಇಂಜಿನ್ ಸರ್ಕಾರವಿದೆ. ಆದರೂ ಮಹದಾಯಿ ಯೋಜನೆ ಸರಿ ಮಾಡಿದ್ದಾರಾ? ಮಹಾದಾಯಿ ವಿವಾದ ಬಗೆಹರಿಸದೆ ಗೋವಾದಿಂದ ತಕರಾರು ತೆಗೆಸಿದ್ದಾರೆ. ಅಂಥವರು ಕರ್ನಾಟಕವನ್ನು ಉಳಿಸುತ್ತಾರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net